

ಕುಪ್ಪಂ: ವೃದ್ಧೆಯೊಬ್ಬಳ ಶವವನ್ನು ಹೊತ್ತೊಯ್ಯುತ್ತಿದ್ದ ವೇಳೆ ನಡೆದ ವಿದ್ಯುತ್ ಅವಘಡದಿಂದಾಗಿ ಮೂವರು ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ಕುಪ್ಪಂನಲ್ಲಿ ನಡೆದಿದೆ.
ಮೃತರನ್ನು ಮುನೆಪ್ಪ, ತಿರುಪತಿ ಮತ್ತು ರವೀಂದ್ರನ್ ಎಂದು ಗುರುತಿಸಲಾಗಿದೆ. ಗ್ರಾಮದ ನಿವಾಸಿ ರಾಣೆಮ್ಮ ಎಂಬ ಮಹಿಳೆಯು ಶುಕ್ರವಾರದಂದು ಮರಣವನ್ನು ಹೊಂದಿದ್ದಳು. ಆಕೆಯ ಮೃತದೇಹವನ್ನು ಅಂತಿಮ ವಿಧಿ-ವಿಧಾನದಂತೆ ಸ್ಥಳೀಯ ಸ್ಮಶಾನಕ್ಕೆ ಹೊತ್ತೊಯ್ಯುಲಾಗುತ್ತಿತ್ತು. ಈ ವೇಳೆ ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ನಾಲ್ವರು ಹೈ-ಟೆನ್ಷನ್ ಎಲೆಕ್ಟ್ರಿಕ್ ಕೇಬಲ್‌ನ ಸಂಪರ್ಕಕ್ಕೆ ಬಂದು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ.
ನೋಡುನೋಡುತ್ತಿದ್ದಂತೆ ಮೂವರು ಸ್ಥಳದಲ್ಲಿಯೇ ಮರಣವನ್ನು ಹೊಂದಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಕಬ್ಬಿಣದ ಶವಪೆಟ್ಟಿಗೆಯ ಮೇಲ್ಬಾಗವು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ನಂತರ, ಸ್ಥಳೀಯರು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಇರುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)