ವಿದೇಶಿ ಪ್ರಜೆ ಸೇರಿ ಮೂವರು ಪೆಡ್ಲರ್ ಸೆರೆ

Arrest Kaidhi
Published on

ಬೆಂಗಳೂರು: ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಸೇರಿ ಮೂವರನ್ನು ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ಬಂಧಿಸಿ 85 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಸೋಲದೇವನಹಳ್ಳಿ ಸಮೀಪದ ನಿವಾಸಿ ಕೌಸ್ಸಿ ಜೂಲ್ಸ್, ಬೆಳ್ಳಂದೂರಿನ ಅಬ್ದುಲ್ ಬಷೀರ್ ಹಾಗೂ ಪಶ್ಚಿಮ ಬಂಗಾಳ ಮೂಲದ ಮಲೈಕುಜರ್ ಬಂಧಿತರು. ಇವರಿಂದ 515 ಗ್ರಾಂ ಎಂಡಿಎಂಎ, 14 ಕೆ.ಜಿ. ಗಾಂಜಾ ಸೇರಿ 85.5 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7 ವರ್ಷಗಳ ಹಿಂದೆ ಭಾರತಕ್ಕೆ ಬಿಜಿನೆಸ್ ವೀಸಾಡಿ ಮಂದಿದ್ದ ಐವರಿಕೋಸ್ಟ್‌ನ ಜೂಲ್ಸ್, ಮೊದಲು ಉತ್ತರ ಭಾರತದಲ್ಲಿ ನೆಲೆಸಿದ್ದ. ಅಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಮೇಲೆ ನಗರಕ್ಕೆ ಬಂದು ಡ್ರಗ್ಸ್ ಮಾರಾಟ ಶುರು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿದೇಶಿ ಪೆಡ್ಲರ್‌ನನ್ನು ಬಂಧಿಸಿದ ಸಿಸಿಬಿ ಪೊಲೀಸರು, 77 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಾರತ್ತಹಳ್ಳಿ ಪೊಲೀಸರು, ಗಾಂಜಾ ಮಾರಾಟದಲ್ಲಿ ನಿರತನಾಗಿದ್ದ ಆಟೋ ಚಾಲಕ ಅಬ್ದುಲ್ ಬಷೀರ್‌ನ್ನು ಬಂಧಿಸಿದ್ದಾರೆ. ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ದುಬಾರಿ ಬೆಲೆಗೆ ಮಾರುತ್ತಿದ್ದ. 7.5 ಲಕ್ಷ ರೂ. ಮೌಲ್ಯದ 10.370 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಅದೇ ರೀತಿಯಾಗಿ ಸಂಪಿಗೇಹಳ್ಳಿ ಪೊಲೀಸರು ಪಶ್ಚಿಮ ಬಂಗಾಲದ ಮಲೈಕುಜರ್ ಎಂಬಾತನ್ನು ಬಂಧಿಸಿ 4 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ನಗರದಲ್ಲಿ ಕೂಲಿ ಕೆಲಸ ಮಾಡಿದ್ದ ಆರೋಪಿ, ಒಡಿಶಾ ಕಡೆಯಿಂದ ಗಾಂಜಾ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net