

ಅಮರಾವತಿ: ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಪ್ರಸಿದ್ಧ ಗಾದೆ ಮಾತಿದೆ. ಆದರೆ, ಇಲ್ಲೊಬ್ಬಳು ಮಹಿಳೆ ಚಿಕ್ಕ ವಿಚಾರಕ್ಕೆ ಗಂಡ ಮಕ್ಕಳಿಗೆಲ್ಲಾ ಇಲಿ ಪಾಷಾಣ ಹಾಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯೂ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ನಾರಾಯಣಪುರ ತಾಂಡಾದಲ್ಲಿ ನಡೆದಿದ್ದು, ಮೂವರೂ ಮಕ್ಕಳು ಮೃತಪಟ್ಟಿದ್ದು, ಪತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಲ್ನಾಡು ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ರವಿ ನಾಯಕ್ ನಲ್ಗೊಂಡ ಜಿಲ್ಲೆ ನರಸಾಪುರದ ವಸಂತ ಎಂಬುವವರನ್ನು ಹದಿನೈದು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ನಾಲ್ವರು ಗಂಡು ಮಕ್ಕಳಿದ್ದು, ಕೊನೆಯ ಇಬ್ಬರು ಅವಳಿಜವಳಿ. ಇವರಲ್ಲಿ ಮೂವರು ಮಕ್ಕಳು ತಂದೆ-ತಾಯಿಯೊಟ್ಟಿಗೆ ಇದ್ದರೆ ಎರಡನೇ ಮಗ ಕಾರ್ತಿಕ್ ಪ್ರಕಾಶ್ ಅಜ್ಜಿ ಮನೆಯಲ್ಲಿ ಇದ್ದಾನೆ.
ಹೈದರಾಬಾದಿನಲ್ಲಿ ನೆಲೆಸಿರುವ ರವಿ ನಾಯಕ್ 10 ದಿನಕ್ಕೊಮ್ಮೆ ಊರಿಗೆ ಭೇಟಿ ನೀಡುತ್ತಿದ್ದರು. ಹೀಗಿರುವಾಗ ಮೂರು ದಿನಗಳ ಹಿಂದೆ ರವಿನಾಯಕ್ ನಾರಾಯಣಪುರ ತಾಂಡಾಕ್ಕೆ ಬಂದಿದ್ದರು. ವಸಂತಾ ತನ್ನ ಹುಟ್ಟೂರು ನಲ್ಗೊಂಡ ಜಿಲ್ಲೆ ನರಸಾಪುರಕ್ಕೆ ಹೋಗುವುದಾಗಿ ಪತಿ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ರವಿ ನಾಯಕ್ ಒಪ್ಪಿಗೆ ನೀಡಿಲ್ಲ. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಬೆಳಗ್ಗೆ ನಿದ್ದೆಯಿಂದ ಎಲ್ಲರೂ ಎದ್ದಾಗ ಎಂದಿನಂತೆ ವಸಂತಾ ಸ್ಟ್ರಾಂಗ್ ಟೀ ಮಾಡಿಕೊಟ್ಟಿದ್ದಾಳೆ. ಮೂವರು ಮಕ್ಕಳೊಂದಿಗೆ ರವಿ ಮತ್ತು ವಸಂತಾ ಕೂಡ ಚಹಾ ಸೇವಿಸಿದ್ದಾರೆ.
ಚಹಾ ಸೇವಿಸಿದ ಬಳಿಕ ಮಕ್ಕಳು ಹಾಗೂ ರವಿ ವಾಂತಿ ಮಾಡಲು ಶುರು ಮಾಡಿದ್ದು, ಕೂಡಲೇ ಮಾಚರ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮಕ್ಕಳು ಮೃತಪಟ್ಟಿದ್ದಾರೆ. ರವಿ ನಾಯಕ್ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದಿಗೆ ರವಾನಿಸಲಾಗಿದೆ. ವಸಂತಾಳ ವರ್ತನೆ ನೋಡಿ ಅನುಮಾನಗೊಂಡ ಆಕೆಯ ಸಂಬಂಧಿಕರು ಆಕೆಯನ್ನು ವಿಚಾರಿಸಿದಾಗ ವಿಚಾರಿಸಿಕೊಂಡಾಗ ಅಸಲಿ ವಿಷಯ ತಿಳಿಸಿದ್ದಾಳೆ.
ತವರು ಮನೆಗೆ ಹೋಗಬೇಡ ಎಂದು ಗಂಡ ಹೇಳಿದ್ದಕ್ಕೆ ಕೋಪಗೊಂಡು ತಾನು ಕೊಟ್ಟ ಚಹಾದಲ್ಲಿ ಇಲಿ ಪಾಷಾಣವನ್ನು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.