ಪಾರ್ಟಿಯೊಳಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು!; 6 ಸಾವು, 26ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ವಿಜಯವಾಣಿ - 2023-12-30T070335.500
Published on

ಉತ್ತರ ಮೆಕ್ಸಿಕೋ: ಪಾರ್ಟಿಯೊಳಗೆ ನುಗ್ಗಿ ಬಂದ ಮೂವರು ದುಷ್ಕರ್ಮಿಗಳು, ಗನ್​ನಿಂದ ಪಾರ್ಟಿಗೆ ಬಂದಿದ್ದ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಮೆಕ್ಸಿಕೋದಲ್ಲಿ ಶುಕ್ರವಾರ (ಡಿ.29) ಮುಂಜಾನೆ ಬಂದೂಕು ಹಿಡಿದ ಮೂವರು ಕಿಡಿಗೇಡಿಗಳು ಪಾರ್ಟಿಯೊಂದಕ್ಕೆ ನುಗ್ಗಿ ಪಾರ್ಟಿಗೆ ಬಂದವರ ಮೇಲೆ ಗುಂಡು ಹಾರಿಸಿ, ಆರು ಜನರನ್ನು ಬಲಿ ಪಡೆದಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಗಾಯಗೊಂಡವರಲ್ಲಿ ಐವರು ಮಕ್ಕಳು ಎಂದು ಹೇಳಲಾಗಿದೆ.

ಗಡಿ ರಾಜ್ಯವಾದ ಸೊನೊರಾದ ಸಿಯುಡಾಡ್ ಒಬ್ರೆಗಾನ್ ನಗರದಲ್ಲಿ ಸಂಭವಿಸಿದ ದಾಳಿಯಲ್ಲಿ ಅನೇಕರು ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಪೈಕಿ ಸ್ಥಳೀಯ ಆಸ್ಪತ್ರೆಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಗುಂಡಿನ ದಾಳಿ ಘಟನೆಯು ನರಹತ್ಯೆ ಮತ್ತು ಹಲವು ಆರೋಪಗಳನ್ನು ಹೊತ್ತಿದ್ದ ಶಂಕಿತ ಕಾರ್ಟೆಲ್ ಸಹಚರರ ಮೇಲೆ ನಡೆದ ದಾಳಿಯಾಗಿದೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಕಾರ್ಟೆಲ್ ಸಹಚರರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net