ಮಂತ್ರಿಗಿರಿ ಬೇಡಿಕೆಗೆ 3 ಬಣ: 66 ಶಾಸಕರಿಂದ ಪ್ರಯತ್ನ; ಮೂಲ-ವಲಸಿಗ ವಾತಾವರಣ ಸೃಷ್ಟಿ

DKS Kharge Siddu
Published on

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ಮೂರು ದಿನಗಳಿಂದ ಪೈಪೋಟಿ ನಡೆದಿರುವ ನಡುವೆಯೇ ಸಚಿವಾಕಾಂಕ್ಷಿಗಳೂ ತೀವ್ರ ಪೈಪೋಟಿ ಆರಂಭಿಸಿದ್ದಾರೆ.

ಜಾತಿ, ಧರ್ಮ, ಪ್ರದೇಶವಾರು, ಮಠಗಳ ಶಿಫಾರಸಿನಡಿ ಸಚಿವ ಸ್ಥಾನ ಪಡೆಯಲು 66ಕ್ಕಿಂತ ಹೆಚ್ಚಿನ ಶಾಸಕರು ಪ್ರಯತ್ನ ನಡೆಸಿದ್ದಾರೆ. ಈ ನಡುವೆಯೇ, ಮೂರು ಬಣಗಳಡಿ ಸಚಿವ ಸ್ಥಾನ ಪಡೆದುಕೊಳ್ಳುವ ಪ್ರಯತ್ನ ನಡೆದಿದೆ.

ರಾಜ್ಯ ಕಾಂಗ್ರೆಸ್​ನಲ್ಲೀಗ ಮೂರು ಪವರ್ ಸೆಂಟರ್​ಗಳಿರುವುದು ಜಗಜ್ಜಾಹೀರಾದ ವಿಚಾರ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರ ಬಣ ಒಂದಿದ್ದರೆ, ಸಿದ್ದರಾಮಯ್ಯ ಬಣ ಇನ್ನೊಂದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ ಮತ್ತೊಂದು.

ಆಪ್ತರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೊಡಿಸುವ ಮೂಲಕ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹಾಗೂ ಆಪ್ತರಿಗೆ ನೆಲೆ ಕಲ್ಪಿಸುವ ಮೂಲಕ ತಮ್ಮ ಶಕ್ತಿ ವೃದ್ಧಿಸಿಕೊಳ್ಳುವುದು ರಾಜಕೀಯದಲ್ಲಿ ಸಹಜ ಮತ್ತು ಸಾಮಾನ್ಯ. ಈಗಲೂ ಅದೇ ರೀತಿ ಬೆಳವಣಿಗೆ ಶುರುವಾಗಿದೆ.

ನಮ್ಮಲ್ಲಿ ಯಾವುದೇ ಬಣ ಇಲ್ಲ ಎಂದು ನಾಯಕರು ಹೇಳಿಕೊಂಡರೂ ಒಳಗೊಳಗೆ ಪ್ರಯತ್ನ ನಡೆದಿದೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವೇಳೆಯೂ ಇಂಥದ್ದೇ ಪೈಪೋಟಿ ನಡೆದಿತ್ತು. ತಮ್ಮ ಕಡೆಯವರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿ ಕೆಲವು ಕಡೆಗಳಲ್ಲಿ ಯಶ ಸಾಧಿಸಿದ್ದರು. ಖರ್ಗೆ ಕೂಡ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯಬಹುದೆಂಬ ನಿರೀಕ್ಷೆಯಲ್ಲಿಯೇ ಸಿದ್ದರಾಮಯ್ಯ ಟಿಕೆಟ್ ಕೊಡಿಸುವ ವಿಚಾರದಲ್ಲಿ ಕೊಂಚ ಮುತುವರ್ಜಿ ವಹಿಸಿ ಮೇಲುಗೈ ಸಾಧಿಸಿದ್ದರು. ಇದೀಗ ಅವರ ಆಪ್ತ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಮುಂದಿನ ಪ್ರಯತ್ನವಾಗಿ ಹೆಚ್ಚಿನವರಿಗೆ ಸಚಿವ ಸ್ಥಾನ ಕೊಡಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಕೂಡ ಆರಂಭಿಸಿದ್ದಾರೆ.

2013ರ ಸಂಪುಟದಲ್ಲಿದ್ದ ಅವರ ಆಪ್ತರ ಜತೆಗೆ ಈ ಚುನಾವಣೆಯಲ್ಲಿ ಗೆದ್ದಿರುವ ಶಾಸಕರು (ಎರಡು ಬಾರಿಗಿಂತ ಹೆಚ್ಚುಬಾರಿ ಗೆದ್ದವರು) ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಸಿದ್ದರಾಮಯ್ಯ ಸುತ್ತ ಸುತ್ತಲಾರಂಭಿಸಿದ್ದಾರೆ. ಹೀಗಾಗಿ ಅವರ ಮೇಲೆ ಒತ್ತಡವೂ ಇದೆ. ಇನ್ನು ಖರ್ಗೆ ಮೇಲೂ ಹೆಚ್ಚಿನ ಒತ್ತಡ ಇರುವಂತೆ ಕಾಣಿಸುತ್ತಿದೆ. ಇಷ್ಟು ದಿನಗಳವರೆಗೂ ಹೈಕಮಾಂಡ್ ಕಡೆ ಕೈ ತೋರಿಸಲು ಅವಕಾಶವಿತ್ತು, ಆದರೀಗ ಅವರೇ ಅಧ್ಯಕ್ಷರಾಗಿರುವ ಕಾರಣ ಆಪ್ತರ ಬೇಡಿಕೆ ಈಡೇರಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಮೂಲ- ವಲಸಿಗ ವಿಚಾರ ಚರ್ಚೆಗೆ ಬರುತ್ತಿದೆ. ಸಿದ್ದರಾಮಯ್ಯ ಜತೆಗಿರುವವರು ವಲಸಿಗರು, ನಾವು ಪಕ್ಷದ ಮೂಲ ನಿವಾಸಿಗಳು. 2013ರಲ್ಲಂತೂ ನಮಗೆ ಅನ್ಯಾಯವಾಗಿದೆ, ಈ ಬಾರಿ ಮೊದಲ ಆದ್ಯತೆ ಮೂಲ ನಿವಾಸಿಗಳಿಗಿರಲಿ ಎಂದು ಕೆಲವು ಹಿರಿಯರೇ ದನಿ ಎತ್ತಿದ್ದಾರೆ. ಈ ವಿಷಯವನ್ನು ಖರ್ಗೆ ಅವರ ಗಮನಕ್ಕೂ ತಂದಿದ್ದಾರೆಂದು ಗೊತ್ತಾಗಿದೆ.

ಹಿರಿಯರ ಕಸಿವಿಸಿ

ತಮಗೆ ಸಚಿವ ಸ್ಥಾನ ಸಿಗಬಹುದೆಂಬ ಖಚಿತತೆ ಹೊಂದಿರುವ ಹಿರಿಯ ನಾಯಕರು ಡಿ.ಕೆ. ಶಿವಕುಮಾರ್ ಕೈ ಕೆಳಗೆ ಕೆಲಸ ಮಾಡುವುದು ಹೇಗೆ ಎಂದು ಚಿಂತಿತರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ, ಸಾಕಷ್ಟು ಶ್ರಮ ಹಾಕಿದ್ದಾರೆ. ಹಾಗೆಂದು ಅವರ ಅಧೀನದಲ್ಲಿ ಕೆಲಸ ಮಾಡುವುದು ಹೇಗೆಂದು ಮಾಜಿ ಸಚಿವರು ತಮ್ಮಲ್ಲೇ ಚರ್ಚೆಯನ್ನೂ ನಡೆಸಿದ್ದಾರೆ. ಇದೇ ಕಾರಣಕ್ಕೆ ಸಿಎಂ ಆಯ್ಕೆ ವಿವೇಚನೆಯನ್ನು ಬಹುತೇಕರು ಹೈಕಮಾಂಡ್​ಗೆ ಬಿಟ್ಟಿದ್ದಾರೆನ್ನಲಾಗಿದೆ.

ರೇಸ್​ನಲ್ಲಿ ಎಷ್ಟು ಮಂದಿ?

ಹೆಚ್ಚು ಸೀನಿಯರ್ ಎನಿಸಿಕೊಂಡವರು, ಎರಡು ಬಾರಿ ಗೆದ್ದವರು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು, ಪರಿಷತ್​ನಲ್ಲಿರುವ ಹಿರಿಯರೂ ಸೇರಿ 66ಕ್ಕಿಂತ ಹೆಚ್ಚು ಸಚಿವಾಕಾಂಕ್ಷಿಗಳು ಇದ್ದಾರೆ ಮತ್ತು ತಮ್ಮೆಲ್ಲ ಪ್ರಯತ್ನ ಹಾಕುತ್ತಿದ್ದಾರೆ. ತೆರೆ ಹಿಂದೆ ನಿಂತು ಸಮುದಾಯದ ಸಭೆಗಳನ್ನು ಮಾಡಿಸಿ ನಿರ್ಣಯ ಮಾಡಿ ಪಕ್ಷದ ಮುಖ್ಯಸ್ಥರಿಗೆ ಕಳಿಸುತ್ತಿದ್ದಾರೆ. ಕೆಲವರಂತೂ ಇಂತಹದ್ದೇ ಖಾತೆ ಕೊಡಬೇಕೆಂದು ಬೇಡಿಕೆ ಮುಂದಿಡುತ್ತಿದ್ದಾರೆ.

ಅಧಿಕಾರ ಹಂಚಿಕೆ ಸೂತ್ರ

ದೊಡ್ಡ ಸಂಖ್ಯೆಯಲ್ಲಿ ಸಚಿವ ಆಕಾಂಕ್ಷಿಗಳಿರುವುದರಿಂದ ಸರ್ಕಾರ ಎರಡು ವರ್ಷ ಕಳೆಯುತ್ತಿದ್ದಂತೆ ಸಂಪುಟ ಪುನಾರಚನೆ ಮಾಡಿ ಮತ್ತೊಂದಿಷ್ಟು ಮಂದಿಗೆ ಅವಕಾಶ ನೀಡಲು ಹೈಕಮಾಂಡ್ ಬಯಸಿದೆ. ಈ ಬಗ್ಗೆ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮೊದಲ ಅವಧಿಗೆ 30 ಮಂದಿಗೆ, ಪುನಾರಚನೆ ವೇಳೆ 20-25 ಮಂದಿಗೆ ಅವಕಾಶ ನೀಡಿದರೆ ಬಹುತೇಕರ ಬಯಕೆ ಈಡೇರಿದಂತಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಮೊದಲ ಅವಧಿಗೆ ಅವಕಾಶ ಕೊಟ್ಟವರು ಕೆಲಸ ಮಾಡುತ್ತಾರೆ, ಸಂಪುಟ ಸೇರಲು ಬಯಸುವವರು ಸಹ ಪಕ್ಷ ಸಂಘಟನೆಗೆ ಶ್ರಮ ಹಾಕುತ್ತಾರೆ, ಇದರ ಲಾಭ ಲೋಕಸಭೆ ಚುನಾವಣೆಯಲ್ಲಾಗಲಿದೆ ಎಂಬ ವಾದವಿದೆ.

ಸೋನಿಯಾ ಜತೆ ಚರ್ಚೆ ಯತ್ನ

ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ಮಾಡಲು ಪ್ರಯತ್ನಿಸಿದ್ದಾರೆನ್ನಲಾಗಿದೆ. ಸೋನಿಯಾ ಸದ್ಯ ಶಿಮ್ಲಾದಲ್ಲಿದ್ದಾರೆ. ಸಂಜೆ ಖರ್ಗೆ ಭೇಟಿಗೂ ಮುನ್ನ ಸೋನಿಯಾರೊಂದಿಗೆ ರ್ಚಚಿಸಲು ಡಿಕೆಶಿ ಬಯಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಮುದಾಯದ ಬೇಡಿಕೆಗಳು

  • ಆರ್ಯ ಈಡಿಗ ಮಹಾ ಸಂಸ್ಥಾನ: ಬಿ.ಕೆ.ಹರಿಪ್ರಸಾದ್, ಎಚ್.ಆರ್.ಗವಿಯಪ್ಪ, ಹರೀಶ್ ಕುಮಾರ್, ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯಕ್​ಗೆ ಸಚಿವ ಸ್ಥಾನದ ಬೇಡಿಕೆ.
  • ಮುಸ್ಲಿಂ: ಒಂದು ಡಿಸಿಎಂ, ಐವರಿಗೆ ಸಚಿವ ಸ್ಥಾನ ಕೊಡಬೇಕು. ಗೃಹ ಖಾತೆ ನೀಡಲೇ ಬೇಕೆಂಬ ಒತ್ತಾಯ.
  • ಮೊಗೇರ ಸಂಘ (ಮೀನುಗಾರ ಸಮುದಾಯ): ಮಾಂಕಳ ಸುಬ್ಬ ವೈದ್ಯಗೆ ಸಚಿವ ಸ್ಥಾನ ಕೊಡಲೇ ಬೇಕೆಂದು ಆಗ್ರಹ.
  • ರೆಡ್ಡಿ ಜನ ಸಂಘ: ರಾಮಲಿಂಗಾ ರೆಡ್ಡಿ ಅವರಿಗೆ ಡಿಸಿಎಂ ಸ್ಥಾನ, ಈ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ.
  • ಧಾರವಾಡ ಮುರುಘಾ ಮಠ: ವಿನಯ್ ಕುಲಕರ್ಣಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು.
  • ವೀರಶೈವ ಸಮಾಜ: ಮುಖ್ಯಮಂತ್ರಿ ಸ್ಥಾನ ನೀಡಬೇಕು ಮತ್ತು ಗೆದ್ದ ಸ್ಥಾನಗಳಿಗೆ ಅನುಸಾರವಾಗಿ ಹೆಚ್ಚು ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net