ಈತ ಅಕ್ಕಂಗೆ ಗೊತ್ತಾಗದಂತೆ ತಂಗಿ ಜತೆ, ತಂಗಿಗೆ ತಿಳಿಯದಂತೆ ಅಕ್ಕನ ಜತೆ ಸರಸವಾಡುತ್ತಿದ್ದ ; ಸೋದರಿಯರಿಗೆ ವಿಷಯ ಗೊತ್ತಾಯ್ತು..ಮೂವರ ಪ್ರಾಣವೂ ಹೋಯ್ತು

Illicit 14 March 20
Published on

ಚಿಕ್ಕಬಳ್ಳಾಪುರ: ಇಬ್ಬರು ಸಹೋದರಿಯರು ಮತ್ತವರ ಪ್ರಿಯಕರನ ಮೃತದೇಹ ಇಂದು ಬೆಳಗ್ಗೆ ಕಾಶಪುರ ಬಳಿ ಸಿಕ್ಕಿದ್ದು, ಇವರ ಸಾವು ಆತ್ಮಹತ್ಯೆ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಕಿರುಗಂಭಿ ಗಂಗರಾಜಪ್ಪ (35), ಆಂಧ್ರ ಮೂಲದ ಸಹೋದರಿಯರಾದ ಶಿವಮ್ಮ (28) ಮತ್ತು ಗಾಯತ್ರಿ (32) ಮೃತರು. ಗಂಗರಾಜಪ್ಪ ಶಿವಮ್ಮ ಮತ್ತು ಗಾಯತ್ರಿ ಇಬ್ಬರೊಂದಿಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಪರಸ್ಪರರಿಗೆ ಗೊತ್ತಾಗುತ್ತಿದ್ದಂತೆ ಮೂವರ ಮಧ್ಯೆಯೂ ಗಲಾಟೆ ನಡೆದಿದೆ. ಅದಾದ ಬಳಿಕ ವಿಷ ಸೇವಿಸರಬಹುದು ಅಂದಾಜಿಸಲಾಗಿದೆ.

ಸಹೋದರಿಯರು ಆಂಧ್ರಪ್ರದೇಶದ ಕದಿರಿ ಮೂಲದವರು. ಶಿವಮ್ಮಳನ್ನು ಅಂದಾರ್ಲಹಳ್ಳಿಯ ಶ್ರೀರಾಮ ಎಂಬುವನಿಗೆ ವಿವಾಹ ಮಾಡಿ ಕೊಡಲಾಗಿದೆ. ಗಾಯತ್ರಿಯ ಪತಿ ಮೃತಪಟ್ಟಿದ್ದು, ಈಕೆಗೆ ಇಬ್ಬರು ಮಕ್ಕಳಿದ್ದಾರೆ.

ಗಂಗರಾಜಪ್ಪ, ಶಿವಮ್ಮ ಮತ್ತು ಗಾಯಿತ್ರಿ ಮೂವರೂ ಕೂಲಿಗೆ ಹೋಗುತ್ತಿದ್ದರು. ಇದೇ ವೇಳೆ ಪರಸ್ಪರರಿಗೆ ಪರಿಚಯ ಆಗಿತ್ತು. ಈ ಗಂಗರಾಜಪ್ಪ ಇವರಿಬ್ಬರೊಂದಿಗೂ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಸಹೋದರಿಯರಿಗೆ ಮೊದಲು ಗೊತ್ತಿರಲಿಲ್ಲ. ಈಗ ಕೆಲವೇ ದಿನಗಳ ಹಿಂದೆ ತಿಳಿದು, ಅಂದಿನಿಂದಲೂ ಜಗಳ, ಗಲಾಟೆ ನಡೆಯುತ್ತಿತ್ತು. ನಾಲ್ಕು ದಿನಗಳ ಹಿಂದೆ ಸಹೋದರಿಯರು ಇಬ್ಬರೂ ಮನೆಯನ್ನು ಬಿಟ್ಟು ಗಂಗರಾಜಪ್ಪನೊಂದಿಗೆ ಬಂದಿದ್ದರು.

ಬಾಗೇಪಲ್ಲಿ ತಾಲೂಕಿನ ಕಾಶಪುರ ಹೊರವಲಯದಲ್ಲಿರುವ ಸುಬ್ಬಯ್ಯ ಎಂಬುವರ ಜಮೀನಿನಲ್ಲಿ ಶುಕ್ರವಾರ ರಾತ್ರಿ ಮೂವರೂ ಸೇರಿ ಅಂತಿಮವಾಗಿ ಚರ್ಚಿಸಿದ್ದಾರೆ. ಅಲ್ಲೇ ಮೂವರ ಮೃತದೇಹವೂ ಸಿಕ್ಕಿದೆ. ಶನಿವಾರ ಬೆಳಗ್ಗೆ ಅಲ್ಲಿ ಬಂದ ಕುರಿಗಾಹಿಗಳು ಅದನ್ನು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಸ್ಥಳ ಪರೀಕ್ಷೆ ನಡೆಸಿದ್ದಾರೆ.

ಆ ಸ್ಥಳದಲ್ಲಿ ತಂಪು ಪಾನೀಯ ಬಾಟಲಿಗಳು, ಊಟದ ಎಲೆಗಳು, ಮೆಕ್ಕೆ ಜೋಳ ಬೆಳೆಗೆ ಸುಳಿ ರೋಗ ನಿಯಂತ್ರಣಕ್ಕೆ ಬಳಸುವ ಕೀಟನಾಶಕ ಔಷಧ ಕೂಡ ಸಿಕ್ಕಿದೆ. ಮೂವರೂ ಒಟ್ಟಿಗೆ ವಿಷ ಬೆರೆಸಿಕೊಂಡು ಊಟ ಮಾಡಿದರಾ? ಅಥವಾ ಯಾರೊಬ್ಬರು ಬೆರೆಸಿದ ವಿಷಕ್ಕೆ ಮೂವರು ಬಲಿಯಾದರಾ? ಎಂಬ ಅನುಮಾನ ಕಾಡುತ್ತಿದೆ. ಗಂಗರಾಜಪ್ಪನಿಗೆ ಕೂಡ ಪತ್ನಿ ಇದ್ದಾರೆ. ಇವರೆಲ್ಲರ ಸಾವಿನಿಂದ ಕುಟುಂಬದವರು ಕಂಗೆಟ್ಟು ಕುಳಿತಿದ್ದಾರೆ.

ಬಾಗೇಪಲ್ಲಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net