

ಸೃಷ್ಟಿಮೂಲ ಚೈತನ್ಯ ಶಕ್ತಿ ಸನಾತನ ಧರ್ಮದಲ್ಲಿ ಪರಮಾತ್ಮ ಅಥವಾ ಭಗವಂತ ಎಂಬುದಾಗಿ ಕರೆಯಲ್ಪಟ್ಟಿದೆ. ಆ ಪರಮಾತ್ಮನಿಗೆ ಮೂರು ಲಕ್ಷಣಗಳು ಯಾವವು? 1. ಶಾಶ್ವತ ಸತ್ಯ, 2. ಪರಿಪೂರ್ಣ ಪ್ರಜ್ಞೆ, 3. ಅನಂತ ಅಸ್ತಿತ್ವ ಶಾಶ್ವತ ಸತ್ಯ: ಶ್ರೀ ನಿಜಗುಣರ ಮಾತಿನಲ್ಲಿ ಕೇಳಿ: ನಿನ್ನೊಳಿಹುದು ಸತ್ಯಪದವು ಅದನು ಅನುಭವದಿಂ ನೋಡು ಮನುಜ ನೀನಹೇಮುಕ್ತನು|| ಸತ್ಯಪದವು ಅಂದರೆ ಸತ್ಯಸ್ವರೂಪವು ನಿನ್ನಲ್ಲಿಯೂ ಇರುವುದು. ಅದನ್ನು (ಸತ್ಯವನ್ನು) ಅನುಭವದಿಂದ ವಿಚಾರಿಸು. ಆಗ ನೀನು ಮುಕ್ತನಾಗುವಿ.
ಸೃಷ್ಟಿಯ ಮೂಲ ವಸ್ತು ಸತ್ಯವು ಸ್ವಗತಾದಿ ಭೇದರಹಿತವಾಗಿದೆ, ಅಂದರೆ ಅದಕ್ಕೆ ಅವಯವಗಳು ಇಲ್ಲ. ಹಾಗಾಗಿ ಅದು ನಿರವಯ. ಆ ಸತ್ಯವಸ್ತುವಿನಂತೆ ಇನ್ನೊಂದು ಸತ್ಯವು ಇಲ್ಲ. ಆದ್ದರಿಂದ ಸಜಾತಿಯ ಭೇದವೂ ಇಲ್ಲ. (ಮನುಷ್ಯರಂತೆ ಮನುಷ್ಯರಿದ್ದಾರೆ, ಗಿಡ ಮರಗಳಂತೆ ಗಿಡಮರಗಳು ಇವೆ. ಆದರೆ ಸತ್ಯವಸ್ತುವಿನಂತೆ ಇನ್ನೊಂದು ಸತ್ಯವಸ್ತು ಇಲ್ಲ, ಇರುವುದಿಲ್ಲ) ಆ ಸತ್ಯವಸ್ತುವಿಗೆ ವಿಜಾತೀಯ ಭೇದವೂ ಇಲ್ಲ. ಅಂದರೆ ಪರಮಾತ್ಮನಿಗೆ (ಸತ್ಯವಸ್ತುವಿಗೆ) ಸಮಾನ ಅಸ್ತಿತ್ವವುಳ್ಳ ಅನ್ಯಪದಾರ್ಥಗಳೇ ಇಲ್ಲವಾದ್ದರಿಂದ ವಿಜಾತೀಯ ಭೇದವೂ ಇಲ್ಲ.
‘ಏಕಮೇವಾದ್ವಿತೀಯಂ ಬ್ರಹ್ಮ’ - ಏಕ, ಏವ, ಅದ್ವೀತೀಯ ಎಂಬ ಈ ಮೂರು ಪದಗಳು ಪರಮಾತ್ಮನಿಗೆ ವಿಶೇಷಣಗಳಾಗಿವೆ. ‘ಏಕ’ ಎಂಬ ಪದವು ಪರಮಾತ್ಮನೊಬ್ಬನೇ ಎಂಬುದನ್ನು ತಿಳಿಸುತ್ತದೆ. ‘ಏವ’ ಎಂಬ ಪದವು ಅವಧಾರಣೆಯಿಂದ ಪರಮಾತ್ಮನೊಬ್ಬನೇ ಇದ್ದಿರುವನು ಎಂಬುದನ್ನು ತಿಳಿಸುತ್ತದೆ. ‘ಅದ್ವಿತೀಯ’ ಎಂಬ ಪದವು ಪರಮಾತ್ಮನಿಗಿಂತ ಭಿನ್ನವಾದದ್ದು ಏನೂ ಇಲ್ಲವೆಂದು ತಿಳಿಸುತ್ತದೆ. ಆದ್ದರಿಂದ ಇವೆಲ್ಲವೂ ಹೇಳುವುದರ ಅರ್ಥ ಶಾಶ್ವತ ಸತ್ಯವೆಂದರೆ ಆ ಪರಮಾತ್ಮನೊಬ್ಬನೇ ಎನ್ನುವುದೇ ಆಗಿದೆ.
ಪರಿಪೂರ್ಣ ಪ್ರಜ್ಞೆ: ಪರಿಪೂರ್ಣ ಪ್ರಜ್ಞೆ ಅಂದರೆ, ಸರ್ವದೇಶ, ಸರ್ವಕಾಲ, ಸರ್ವ ವಸ್ತುಗಳನ್ನು ಅರಿಯುವ ಅರಿವು. ಪರಿಪೂರ್ಣ ಎನ್ನುವುದು ಏಕರೂಪವಾಗಿದೆ. ಅದಕ್ಕೆ ಪರಿಪೂರ್ಣ ಪ್ರಜ್ಞೆ ಎಂದು ಕರೆದಿರುವುದು ತುಂಬ ಅರ್ಥಪೂರ್ಣವಾಗಿದೆ.