

ಬೆಂಗಳೂರು : ಮಾದಕ ವಸ್ತು ಮಾರಾಟ ಹಾಗೂ ಮನೆ ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನೈಜಿರಿಯಾ ಪ್ರಜೆ ಸೇರಿ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಿಂದ ಮಾದಕ ವಸ್ತು ತರಿಸಿಕೊಂಡು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಇಮಾನ್ಯೂಯಲ್ ಲೋಟೋಚುಕುವಾ(೨೭) ನೈಜಿರಿಯಾ ಪ್ರಜೆಯನ್ನು ಬಂಧಿಸಲಾಗಿದೆ. ಆರೋಪಿಯಿಂದ ೫ ಲಕ್ಷ ರೂ. ಮೌಲ್ಯದ ೨೩ ಗ್ರಾಂ ಕೋಕೇನ್, ೨೩೮ ಗ್ರಾಂ ಸಿಂಥೆಟಿಕ್ ಡ್ರಗ್ಸ್, ೫೭ ಸಾವಿರ ರೂ. ನಗದು, ತೂಕದ ಯಂತ್ರ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಮೂರು ವರ್ಷಗಳ ಹಿಂದೆ ವೈದ್ಯಕೀಯ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿ, ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆದುಕೊಂಡಿದ್ದ ಆರೋಪಿ, ಆ ನಂತರ ಜೀವನ ನಿರ್ವಹಣೆಗಾಗಿ ದೆಹಲಿಯಿಂದ ಮಾದಕ ವಸ್ತು ಕೋಕೇನ್ ಹಾಗೂ ಸಿಂಥೆಟಿಕ್ ಡ್ರಗ್ಸ್‌ಗಳನ್ನು ತರಿಸುತ್ತಿದ್ದ. ಬಳಿಕ ಅವುಗಳನ್ನು ಕೊರಿಯರ್ ಹಾಗೂ ಫುಡ್ ಡೆಲವರಿ ಬಾಯ್‌ಗಳ ಮೂಲಕ ಗ್ರಾಹಕರಿಗೆ ಪೂರೈಕೆ ಮಾಡಿ, ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದ. ಈ ಮಾಹಿತಿ ಮೇರೆಗೆ ಠಾಣಾಧಿಕಾರಿ ಸಿ.ಬಿ.ಶಿವಸ್ವಾಮಿ, ಪಿಎಸ್‌ಐ ಕೆ.ಎಲ್.ಪ್ರಭು ನೇತೃತ್ವದ ತಂಡ ಆರೋಪಿ ಮನೆ ಮೇಲೆ ದಾಳಿ ನಡೆಸಿ ಮಾದಕವಸ್ತು ಸಮೇತ ಬಂಧಿಸಿದೆ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಮನೆ ಕಳ್ಳರ ಬಂಧನ:
ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಚಿನ್ನಾಭರಣ, ನಗದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ರಸ್ತೆ ನಿವಾಸಿ ನಾಗರಾಜ ಅಲಿಯಾಸ್ ಮತ್ತಿನಾಗ(೩೦) ಮತ್ತು ತಿರುಮಲ(೨೩) ಬಂಧಿತ. ಆರೋಪಿಗಳಿಂದ ೨೫ ಲಕ್ಷ ರೂ. ಮೌಲ್ಯದ ೩೬೬ ಗ್ರಾಂ ಚಿನ್ನಾಭರಣ, ೩.೫ ಲಕ್ಷ ರೂ.ಮೌಲ್ಯದ ೪ ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ನೆರೆ ಜಿಲ್ಲೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.