

ಬೆಂಗಳೂರು: ಸಿವಿಲ್ ಕಂಟ್ರಾಕ್ಟರ್‌ಗೆ ಹನಿಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್, ಅಜಯ್ ಹಾಗೂ ಜಯರಾಜ್ ಬಂಧಿತರು. ಸಿವಿಲ್ ಕಂಟ್ರಾಕ್ಟರ್ ಒಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ನಯನಾ ಎಂಬಾಕೆ ಸೇರಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಸಿವಿಲ್ ಕಂಟ್ರಾಕ್ಟರ್‌ಗೆ ಐದಾರು ತಿಂಗಳುಗಳ ಹಿಂದಷ್ಟೇ ಪರಿಚಯವಾಗಿದ್ದ ನಯನಾ ಆಗಾಗ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ತೋರಿಸಬೇಕು ಎಂದು ಹೇಳಿ ಹಣ ಪಡೆದುಕೊಳ್ಳುತ್ತಿದ್ದಳು. ಅಲ್ಲದೇ ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರರು ಹೋಗಿರಲಿಲ್ಲ. ಆದರೆ ಡಿ.೯ರಂದು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ ಎಂದು ಒತ್ತಾಯಿಸಿದ್ದಾಳೆ. ಅದರಂತೆ ಆಕೆಯ ಮನೆಗೆ ಹೋಗಿದ್ದು, ಇಬ್ಬರು ಮನೆಯಲ್ಲಿ ಕುಳಿತು ಮಾತನಾಡುದ್ದಾಗ ಏಕಾಏಕಿ ಬಂದ ಮೂವರು ಆರೋಪಿಗಳು, ನಾವು ಕ್ರೈಂ ಪೊಲೀಸರು, ನೀವು ವ್ಯಭಿಚಾರದಲ್ಲಿ ತೊಡಗಿದ್ದೀರಾ ಎನ್ನುತ್ತಾ ಬೆದರಿಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಎರಡು ಲಕ್ಷ ರೂ. ಕೊಡು ಇಲ್ಲದಿದ್ದರೆ, ನಿಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿಮ್ಮ ಪತ್ನಿಗೆ ಹೇಳುತ್ತೇವೆ ಎಂದು ಬೆದರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡಿದ್ದಾರೆ. ಅಲ್ಲದೇ ೨೭ ಸಾವಿರ ನಗದು ಕಸಿದು ಮತ್ತು ಜತೆಗೆ ೮ ಸಾವಿರ ಗೂಗಲ್ ಪೇ ಮಾಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಆರೋಪಿಗಳನ್ನು ಹಿಂಬಾಲಿಸಿ ನಯನಾ ಕೂಡ ಹೋಗಿದ್ದಾಳೆ. ಈ ಬಗ್ಗೆ ಅನುಮಾನಗೊಂಡ ದೂರುದಾರ, ಆಕೆಗೆ ಕರೆ ಮಾಡಿ ಪೊಲೀಸರಿಗೆ ದೂರು ಕೊಡೋಣ ಬಾ ಎಂದು ಕರೆದಿದ್ದರು. ಆದರೆ ನೀವೇನಾದರೂ ದೂರು ಕೊಟ್ಟರೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯಾ ಎಂದು ನಿನ್ನ ಪತ್ನಿಗೆ ಹೇಳುತ್ತೇನೆ ಎಂದು ನಯನಾ ಬೆದರಿಸಿದ್ದಾಳೆ. ಇದರಿಂದಾಗಿ ಮರ್ಯಾದೆಗೆ ಅಂಜಿ ದೂರು ಕೊಡದೆ ಸುಮ್ಮನಾಗಿದ್ದಾರೆ. ನಂತರದಲ್ಲಿ ತಾನು ಮಹಿಳೆಯ ಮಾತನ್ನು ನಂಬಿ ಮೋಸ ಹೋಗಿರುವುದನ್ನು ಅರಿತ ಸಿವಿಲ್ ಕಂಟ್ರಾಕ್ಟರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.