ಅರಸೀಕೆರೆ: ಪಟ್ಟಣ ಹಾಗೂ ಹೊರವಲಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರತ್ಯೇಕ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ಸುಮಾರು 6 ಕೆಜಿ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕುಮಾರಿ, ಇರ್ಷಾದ್ ಉಲ್ಲಾ ಖಾನ್ ಮತ್ತು ರಿಜ್ವಾನ್ ಖಾನ್ ಬಂಧಿತರು.
ವಿವರ: ಅಬಕಾರಿ ನಿರೀಕ್ಷಕಿ ಎಚ್.ಡಿ.ರಮ್ಯಾ ಹಾಗೂ ಸಿಬ್ಬಂದಿ ಶನಿವಾರ ರಾತ್ರಿ ಗಸ್ತಿನಲ್ಲಿದ್ದಾಗ ತಾಲೂಕಿನ ಬಂಡೀಹಳ್ಳಿ ಸಮೀಪ ಬೈಕ್ ಒಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಿಕೊಂಡಿದ್ದು ಕುಮಾರಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬೈಕ್ ಸವಾರ ಅಭಿಲಾಷ್ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಬಂಧಿತಳಿಂದ ಸುಮಾರು 520 ಗ್ರಾಂ ತೂಕದ ಗಾಂಜಾ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ಬೈಕ್‌ಅನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಅಬಕಾರಿ ಆಯುಕ್ತರ ಕಚೇರಿ ಹೆಚ್ಚುವರಿ ಪ್ರಭಾರ ಉಪನಿರೀಕ್ಷಕ ವಿ.ಜಿ.ಜಯಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ದಾಳಿ ನಡೆಸಲಾಗಿ, ಲಕ್ಷ್ಮೀದೇವರಹಳ್ಳಿ ಸಮೀಪ 429 ಗ್ರಾಂ ಗಾಂಜಾ ಹಾಗೂ ಸಾಗಾಣಿಕೆಗೆ ಬಳಸುತ್ತಿದ್ದ ಸ್ಕೂಟರ್‌ಅನ್ನು ವಶಪಡಿಸಿಕೊಂಡು ಇರ್ಷಾದ್ ಉಲ್ಲಾ ಖಾನ್, ರಿಜ್ವಾನ್ ಖಾನ್ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಪ್ರಕರಣಗಳ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ಸಿಬ್ಬಂದಿ ರಂಜಿತಾ, ತೋಟದೇಶ, ಮಲ್ಲಿಕಾರ್ಜುನ ಬಿ.ಗಿಣ್ಣಿ, ಮಲ್ಲಿಕಾರ್ಜುನ ಕಲಬುರಗಿ ಭಾಗವಹಿಸಿದ್ದರು.