ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪ ಪ್ರಕರಣ: ಶಾಸಕ ಮುನಿರತ್ನ ಬಂಧನ

mla
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್​ಗೆ ಜೀವ ಬೆದರಿಕೆ, ಜಾತಿ ನಿಂದನೆ ಹಾಗೂ ಹಣ ವಂಚಿಸಿದ ಆರೋಪದಡಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶಕ್ಕೆ ತೆರಳುವ ಯತ್ನದಲ್ಲಿದ್ದಾಗ ಕೋಲಾರ ಜಿಲ್ಲೆಯ ನಂಗಲಿ ಸಮೀಪ ಮುನಿರತ್ನ ಅವರನ್ನು ದಸ್ತಗಿರಿ ಮಾಡಿ ಬೆಂಗಳೂರಿಗೆ ಕರೆತರಲಾಗಿದೆ.

ಶನಿವಾರ ಬೆಳಗ್ಗೆ ಚೆಲುವರಾಜು ಮತ್ತು ವೇಲು ನಾಯ್ಕರ್ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಮುನಿರತ್ನ ವಿರುದ್ಧ ಪ್ರತ್ಯೇಕ ದೂರು ನೀಡಿದ್ದರು. ಎರಡೂ ದೂರನ್ನು ಆಧರಿಸಿ ಎಫ್​ಐಆರ್ ದಾಖಲಿಸಲಾಗಿತ್ತು. ಕೇಸ್ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಮುನಿರತ್ನ ಮಧ್ಯಾಹ್ನದಿಂದಲೇ ನಾಪತ್ತೆಯಾಗಿದ್ದರು.

ಗುತ್ತಿಗೆದಾರ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ ಲಂಚಕ್ಕೆ ಬೇಡಿಕೆ, ಪ್ರಾಣ ಬೆದರಿಕೆ ಆರೋಪ ಕುರಿತು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಬಳಿಕ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆ ಕೋರಿದ್ದರು. ಈ ಬೆನ್ನಲ್ಲೇ ಚೆಲುವರಾಜು ಅವರಿಂದ ದೂರು ಸ್ವೀಕರಿಸಿದ ವೈಯಾಲಿಕಾವಲ್ ಠಾಣೆ ಪೊಲೀಸರು ಮುನಿರತ್ನ, ಅವರ ಗನ್​ವ್ಯಾನ್ ವಿಜಯಕುಮಾರ್, ಶಾಸಕರ ಕಾರ್ಯದರ್ಶಿ ಅಭಿಷೇಕ್ ಹಾಗೂ ವಸಂತ್ ಕುಮಾರ್ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಸಂಬಂಧ ವೇಲುನಾಯ್ಕರ್ ಕೂಡ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ಸಂಬಂಧವೂ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಮುನಿರತ್ನ ಅವರನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಭಾನುವಾರ ರಜೆ ದಿನ, ಈದ್ ಮಿಲಾದ್ ಹಿನ್ನೆಲೆಯಲ್ಲಿ ಸೋಮವಾರವೂ ರಜೆ ಇರುವುದರಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಮಂಗಳವಾರ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಬಹುದು. ಜಾತಿ ನಿಂದನೆ, ಬೆದರಿಕೆ ಆರೋಪಗಳಡಿ ಎಫ್​ಐಆರ್ ದಾಖಲಾಗಿರುವುದರಿಂದ ತಕ್ಷಣಕ್ಕೆ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.

ಮನೆ ಸುತ್ತ ಭದ್ರತೆ: ಬೆಂಗಳೂರಿನ ವೈಯಾಲಿಕಾವಲ್​ನಲ್ಲಿರುವ ಮುನಿರತ್ನ ನಿವಾಸಕ್ಕೆ ಕೆಲ ಸಂಘಟನೆಗಳು ಮುತ್ತಿಗೆ ಹಾಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರ ಮನೆ ಪ್ರವೇಶಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ, ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ.

ಸಿಎಂ ಭೇಟಿಯಾದ ದೂರುದಾರ: ಶಾಸಕ ಮುನಿರತ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಗುತ್ತಿಗೆದಾರ ಚಲುವರಾಜು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಘಟನೆಯ ಮಾಹಿತಿ ನೀಡಿದರು.

ನನ್ನನ್ನು ಮುಗಿಸಲು ಷಡ್ಯಂತ್ರ: ಚೆಲುವರಾಜ್ ಈಗಲೇ ಆಡಿಯೋದೊಂದಿಗೆ ಸ್ಪೀಕರ್ ಕಚೇರಿಗೆ ಬರಲಿ. ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಚೆಲುವರಾಜ್ ನನ್ನನ್ನು ಶ್ಲಾಘಿಸಿದ್ದರು. 7-8 ವರ್ಷಗಳಿಂದ ನನ್ನ ಜತೆಯಲ್ಲಿದ್ದರು. ಈಗ ನಾನು ಹಣ ಕೇಳುತ್ತೇನೆಯೇ ಎಂದು ಬಂಧನಕ್ಕೂ ಮುನ್ನ ಮಾಧ್ಯಮಗಳಿಗೆ ಮುನಿರತ್ನ ಪ್ರತಿಕ್ರಿಯೆ ನೀಡಿದ್ದರು. ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನನ್ನ ಬಳಿ ಬಂದು ಯಾರೋ ಹಲ್ಲೆ ಮಾಡಿದ್ದರು ಅಂದಿದ್ದರು. ನನ್ನ ಬಾಯಿ ಶುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಟೀಕೆಗೆ ತಿರುಗೇಟು ನೀಡಿದ ಮುನಿರತ್ನ, ಮೊದಲು ಸಿಎಂ ತಮ್ಮ ಜತೆ ಇರುವವರ ಬಾಯಿ ಮುಚ್ಚಿಸಲಿ. ನಾನು ಕಾನೂನಿನ ಮೊರೆ ಹೋಗುತ್ತೇನೆ. ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ನಾನು ಕೆಟ್ಟವನಾಗಿದ್ದೇನೆಂದರು.

ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಶಾಸಕ ಮುನಿರತ್ನ ವಿರುದ್ಧ ವಿವಿಧ ಪ್ರಕರಣ ದಾಖಲಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಎಲ್ಲ ಆರೋಪಗಳಿಗೂ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ನೋಟಿಸ್​ನಲ್ಲಿ ಕಾರಣ ಕೇಳಿದ್ದಾರೆ. ನೋಟಿಸ್ ತಲುಪಿದ ಐದು ದಿನಗಳೊಳಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಲಾಗಿದೆ.

ಠಾಣೆ ಮುಂದೆ ಹೈಡ್ರಾಮಾ: ಮುನಿರತ್ನ ಬಂಧನ ಸುದ್ದಿ ತಿಳಿದು ವೈಯ್ಯಾಲಿಕಾವಲ್ ಪೊಲೀಸ್ ಠಾಣೆ ಮುಂದೆ ಶಾಸಕರ ಬೆಂಬಲಿಗರು ಪ್ರತಿಭಟಿಸಿದರು. ಇದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ವಣವಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಿದ ನಂತರ ಪರಿಸ್ಥಿತಿ ತಿಳಿಯಾಗಿದೆ.

ವೇಲು ನಾಯ್ಕರ್ ಆರೋಪ

(ಎಫ್​ಐಆರ್​ನಲ್ಲಿ ದಾಖಲಾಗಿರುವ ಅಂಶಗಳು)

* ಶಾಸಕರು ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದರು

* ಸ್ನೇಹಿತರು ಈ ವಿಚಾರವನ್ನು ನನಗೆ ತಿಳಿಸಿದ್ದರು

* ಕೆಲ ದಿನದ ಹಿಂದೆ ಚೆಲುವರಾಜ್ ಸಿಕ್ಕಿದ್ದರು

* ಮುನಿರತ್ನ ಅವರು ಲಂಚ ಕೇಳ್ತಿದ್ದಾರೆಂದರು

* ಲಂಚ ಕೊಡದಂತೆ ಅವರಿಗೆ ಹೇಳಿ ಕಳುಹಿಸಿದ್ದೆ

* ಮೇ 18ರಂದು ಚೆಲುವರಾಜ್ ಮೇಲೆ ಹಲ್ಲೆ

* ಕಚೇರಿಗೆ ಕರೆಸಿಕೊಂಡು ಮುನಿರತ್ನರಿಂದ ಕೃತ್ಯ

* ಆ ದಲಿತನ ಮಾತು ಕೇಳ್ತಿಯಾ ಅಂತ ನಿಂದನೆ

* ಈ ವೇಳೆ ಚೆಲುವರಾಜ್ ಮೇಲೆ ಹಲ್ಲೆ ನಡೆದಿತ್ತು

* ನೀನು ಗೌಡ, ಆ ದಲಿತನ ಸಹವಾಸ ಏಕೆಂದಿದ್ದರು

* ನಿಮ್ಮನೆ ಹೆಣ್ಣು ಮಕ್ಕಳನ್ನ ತಲೆ ಹಿಡಿ ಎಂದಿದ್ದರು

* ನಾನು ಶಾಸಕ, ಏನು ಮಾಡಲಾಗಲ್ಲ ಎಂದ ಧಮ್ಕಿ

* ಮುನಿರತ್ನ ಮಾತು ಚೆಲುವರಾಜ್​ರಿಂದ ರೆಕಾರ್ಡ್

* ದಲಿತ- ಒಕ್ಕಲಿಗ ಜನಾಂಗಕ್ಕೆ ದ್ವೇಷ ತರುವ ಯತ್ನ

* ಮುನಿರತ್ನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು

ಚೆಲುವರಾಜ್ ಆರೋಪ

(ಎಫ್​ಐಆರ್​ನಲ್ಲಿರುವುದು)

* ಮುನಿರತ್ನ 2021ರಲ್ಲಿ 10 ಕಸದ ಆಟೋ ಕೊಡಿಸುತ್ತೇನೆಂದಿದ್ದರು

* ಬಳಿಕ ನನ್ನಿಂದ 20 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿದ್ದರು

* 2023 ಆ.14ಕ್ಕೆ ಘನತ್ಯಾಜ್ಯ ಅಧಿಕಾರಿಗಳಿಂದ ಶಾಸಕರ ಕಚೇರಿಗೆ ಕರೆ

* ಸಭೆ ಬಳಿಕ ಕಮಿಷನ್ ಕೇಳಿದ ಶಾಸಕರು, ಹಣವಿಲ್ಲ ಎಂದಾಗ ನಿಂದನೆ

* ಗಂಗಾ ಎಂಟರ್ ಪ್ರೖೆಸಸ್ ಗುತ್ತಿಗೆ ಬದಲಿಸುತ್ತೇನೆಂದು ಬೆದರಿಕೆ

* ಆ ವೇಳೆ ಕೆಟ್ಟ ಪದಗಳಿಂದ ನಿಂದನೆ, ಆತ್ಮಹತ್ಯೆಗೆ ಯೋಚಿಸಿದ್ದೆ

* 3 ವರ್ಷದಿಂದ ನನ್ನ ವಾರ್ಡ್​ಗಳಲ್ಲಿ ಕೆಲಸ ಮಾಡಿದ್ದಕ್ಕೆ 36 ಲಕ್ಷಕ್ಕೆ ಬೇಡಿಕೆ

* 30 ಲಕ್ಷದಲ್ಲಿ 15 ಲಕ್ಷ ಸಾಲ ಮಾಡಿ ಕೊಡುತ್ತೇನೆಂದರೂ ನಿಂದನೆ

* ಮತ್ತೆ ಮನೆಗೆ ಕರೆಸಿ ಹಣಕ್ಕೆ ಬೇಡಿಕೆ, ಇಲ್ಲ ಎಂದಾಗ ಮುಖಕ್ಕೆ ಹಲ್ಲೆ

* ಹೇಳಿದಂತೆ ಕೇಳದಿದ್ದರೆ ಟೆಂಡರ್ ರದ್ದುಗೊಳಿಸುವ ಬೆದ್ರಿಕೆ

* 2024ರ ಮೇ18ರಂದು ಮತ್ತೆ ಕಚೇರಿಗೆ ಕರೆಸಿ ಹಣಕ್ಕೆ ಬೇಡಿಕೆ

* ತಾಯಿ ಬಗ್ಗೆ ಅಸಭ್ಯ ಪದಗಳಿಂದ ಧಮ್ಕಿ

ಮುನಿರತ್ನ ಬಳಸಿರುವ ಭಾಷೆ ಕೇಳಿದೆ. ಅದು ಅವರದ್ದೇ ಏನೋ ಗೊತ್ತಿಲ್ಲ, ಅವರದ್ದೇ ಆದಲ್ಲಿ ಕ್ರಮ ತೆಗೆದುಕೊಳ್ಳಬೇಕಲ್ಲವೆ? ಬಿಜೆಪಿ ರಾಜ್ಯಾಧ್ಯಕ್ಷರು, ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಈಗ ಏನು ಹೇಳುತ್ತಾರೆ? | ಎಚ್.ಡಿ.ಮಹಾದೇವಪ್ಪ, ಸಮಾಜ ಕಲ್ಯಾಣ ಸಚಿವ

ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ, ನಂತರ ಊರಿಗೆ ಬುದ್ಧಿ ಹೇಳಿ. | ಸಿದ್ದರಾಮಯ್ಯ, ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net