VIDEO|ಮಹಾರಾಷ್ಟ್ರದಲ್ಲಿ ಆಹಾರ ಸಿಗದೆ ಸಾವಿರಾರು ಕನ್ನಡಿಗ ಕಾರ್ಮಿಕರ ಪರದಾಟ: ವೈರಲ್ ಆಯ್ತು ವಿಡಿಯೋ

kannadiga
Published on

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ಕರ್ನಾಟಕದ ವಿವಿಧ ಭಾಗಗಳ ಸಾವಿರಾರು ಕೂಲಿ ಕಾರ್ಮಿಕರು ತಿನ್ನಲು ಆಹಾರವಿಲ್ಲದೆ, ಗರ್ಭಿಣಿಯರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದ್ದರಿಂದ ಇವರೆಲ್ಲ ತೊಂದರೆಗೆ ಸಿಲುಕಿದ್ದಾರೆ.
ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣದಲ್ಲಿ, ಕಂಪನಿಗಳ ಕಾವಲುಗಾರ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿ ಜಿಲ್ಲೆಯ ಸವದತ್ತಿ, ಗೋಕಾಕ, ಬೈಲಹೊಂಗಲ, ರಾಮದುರ್ಗ ಹಾಗೂ ಕಿತ್ತೂರು ತಾಲೂಕಿನ ವಿವಿಧ ಹಳ್ಳಿಯ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘‘ಮಹಾರಾಷ್ಟ್ರ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಯ ಆಡಳಿತ ಮಂಡಳಿಗಳು ಲಾಕ್‌ಡೌನ್ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ವಲಸೆ ಕೂಲಿ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ದಿನಸಿ ವಸ್ತುಗಳು, ತರಕಾರಿ ಸಿಗುತ್ತಿಲ್ಲ. ಪಡಿತರ ಧಾನ್ಯವನ್ನೂ ಇಲ್ಲಿಯ ಸರ್ಕಾರ ನಮಗೆ ನೀಡುತ್ತಿಲ್ಲ. ಹಾಗಾಗಿ ಕರ್ನಾಟಕ ಸರ್ಕಾರವು ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’’ ಎಂದು ಅಲ್ಲಿರುವ ಕಾರ್ಮಿಕರು ವಿಡಿಯೋ ಮೂಲಕ ವಿನಂತಿಸಿದ್ದಾರೆ.
‘‘ಕೊಲ್ಲಾಪುರ ನಗರದಲ್ಲಿ 50ಕ್ಕೂ ಅಧಿಕ ಕುಟುಂಬಗಳಿದ್ದು, ಇದರಲ್ಲಿ ಗರ್ಭಿಣಿಯರೂ ಇದ್ದಾರೆ. ನಮ್ಮ ಊರುಗಳಿಗೆ ಹೋಗಲು ಸ್ಥಳೀಯ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಗರ್ಭಿಣಿಯರಿಗೆ ಚಿಕಿತ್ಸೆಗೆ ಯಾವುದೇ ರೀತಿಯ ವ್ಯವಸ್ಥೆಯನ್ನೂ ಮಾಡುತ್ತಿಲ್ಲ. ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ರೋಗಿಗಳನ್ನು ನೋಡದೆ ವಾಪಸ್ ಕಳುಹಿಸಿಕೊಡುತ್ತಿದ್ದಾರೆ.’’

‘‘ಬೆಳಗಾವಿ ಜಿಲ್ಲೆಯ ಯರಗಟ್ಟಿ, ಮುರಗೋಡ, ಹೂಲಿಕಟ್ಟಿ, ಅಕ್ಕಿಸಾಗರ ಸೇರಿ ವಿವಿಧ ಹಳ್ಳಿಯ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೀಗ ಇಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದ್ದು, ನಮ್ಮ ಊರುಗಳಿಗೆ ಕಳುಹಿಸುವಂತೆ ಪೊಲೀಸರಿಗೆ, ಅಧಿಕಾರಿಗಳಿಗೆ ವಿನಂತಿಸಿದರೂ ಸ್ಪಂದಿಸುತ್ತಿಲ್ಲ. ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ನಮ್ಮ ರಕ್ಷಣೆಗೆ ಕ್ರಮ ವಹಿಸಬೇಕು’’ ಎಂದು ಬೈಲಹೊಂಗಲ ಮುರಗೋಡದ ಕೂಲಿ ಕಾರ್ಮಿಕ ನಾರಾಯಣ ಹಾಲಪ್ಪಣ್ಣವರ ವಿನಂತಿಸಿರುವ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net