15 ದಿನದಲ್ಲಿ ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ ಭಾಗ್ಯ

Krishnabairegowda
Published on

ಬೆಂಗಳೂರು: ಕಾಯಂ ಕಚೇರಿ ಇಲ್ಲದೇ ರೈತರ ಸಂಪರ್ಕಕ್ಕೆ ಸಿಗದ ಗ್ರಾಮ ಆಡಳಿತಾಧಿಕಾರಿಗಳಿಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಸ್ಥಳಾವಕಾಶ ನೀಡಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಈ ವೇಳೆ ಮುಂದಿನ 15 ದಿನಗಳಲ್ಲಿ ಕನಿಷ್ಠ 1 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ ತೆರೆಯಲು ಅವಕಾಶ ಮಾಡಿಕೊಡಬೇಕು. ಆಯಾ ಡಿಸಿ ಮತ್ತು ಸಿಇಒಗಳು ಮೇಲ್ವಿಚಾರಣೆ ನಡೆಸಬೇಕೆಂದು ಸಚಿವರು ಮೌಖಿಕ ಆದೇಶ ಹೊರಡಿಸಿದ್ದಾರೆ.

ಸಾಮಾನ್ಯ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಗ್ರಾಮ ಆಡಳಿತಾಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ದೂರು ಬಂದಿವೆ. ಸ್ವಂತ ಕಚೇರಿ ಇಲ್ಲದ ಕಾರಣ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಎಗಳು ನೋವು ಹಂಚಿಕೊಂಡಿದ್ದಾರೆ. ಕಂದಾಯ ವೃತ್ತಗಳಲ್ಲಿ 5,944 ಗ್ರಾಮ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಕನಿಷ್ಠ 1 ಸಾವಿರ ವಿಎಗಳಿಗೆ ಕಚೇರಿ ನಿರ್ಮಿಸುವಷ್ಟು ಸ್ಥಳಾವಕಾಶ ಇದೆ. ಆದರಿಂದ ಮುಂದಿನ 15 ದಿನಗಳಲ್ಲಿ ಈ ಸಂಬಂಧ ಕಾರ್ಯ ಪ್ರವೃತ್ತರಾಗಬೇಕು. ಉಳಿದ ಅಧಿಕಾರಿಗಳಿಗೆ ಮುಂದಿನ ಹಂತದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಅಧಿಕಾರಿಗಳು ಒಂದೇ ಸೂರಿನಡಿ ಜನರ ಕೈಗೆ ಸಿಗುವಂತಿರಬೇಕು ಎಂದರು.

ಅಧಿಕಾರಿಗಳ ಕಣ್ತಪ್ಪಿನಿಂದ ಪಟ್ಟಿ ಸೇರದ ಹಾಡಿ, ಹಟ್ಟಿ, ತಾಂಡಾ, ಗೊಲ್ಲರಹಟ್ಟಿ ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸುವಂತೆ ಡಿಸಿಗಳಿಗೆ ಸಚಿವರು ಸೂಚಿಸಿದರು. 2016ರ ಸುತ್ತೋಲೆಯಲ್ಲಿ ಸೇರಿಸಬಾರದು ಎಂದು ಉಲ್ಲೇಖಿಸಿದೆ ಎಂಬ ನೆಪ ಹೇಳುವಂತಿಲ್ಲ. 2017 ಮತ್ತು 2019ರ ಹೊಸ ಸುತ್ತೋಲೆಯಲ್ಲಿ ಗ್ರಾಮದ ಜತೆ ಹೊಂದಿಕೊಂಡಿದ್ದರೂ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತು ಐಜಿಆರ್ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net