

ಶ್ರೀರಂಗಪಟ್ಟಣ: ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ಒಗ್ಗೂಡಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಸಾವಿರಾರು ಜನರಿಗೆ ಭರ್ಜರಿ ಬಾಡೂಟ ಉಣಬಡಿಸಿ ಸಂತಸದಿಂದ ಸಂಭ್ರಮಿಸಿದರು.
ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಟಿ.ಎಂ.ಹೊಸೂರು ಗೇಟ್ ಬಳಿ ಶುಕ್ರವಾರ ಜಮಾವಣೆಗೊಂಡ ಟಿ.ಎಂ.ಹೊಸೂರು, ಎಂ.ಶೆಟ್ಟಹಳ್ಳಿ, ಸಬ್ಬನಕುಪ್ಪೆ, ಗೌಡಹಳ್ಳಿ, ಕೆ.ಶೆಟ್ಟಹಳ್ಳಿ, ನೀಲನಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನೀರಾವರಿ ಅಭಿವೃದ್ಧಿ ಹರಿಕಾರ ಕೆಂಪೇಗೌಡರ ಬೃಹತ್ ಫ್ಲೆಕ್ಸ್ ಅಳವಡಿಸಿ ಬಳಿಕ ಸಮುದಾಯದ ಮುಖಂಡರೆಲ್ಲರೂ ಸಾಮೂಹಿಕವಾಗಿ ಕ್ಷೀರಾಭಿಷೇಕ, ಪುಷ್ಪಾರ್ಚನೆ ಮಾಡಿ, ಪೂಜೆಗಳೊಂದಿಗೆ ಜಯಘೋಶಗಳನ್ನು ಮೊಳಗಿಸಿ ಸಂಭ್ರಮಿಸಿದರು.
ನಾಡಪ್ರಭುಗಳ ಕೆರೆ-ಕಟ್ಟೆಗಳ ಅಭಿವೃದ್ಧಿ ಹಾಗೂ ವಿಶ್ವವೇ ತಿರುಗಿ ನೋಡುವಂತ ಬೆಂಗಳೂರು ಕಟ್ಟಿದ ಕಾರ್ಯವನ್ನು ಸ್ಮರಿಸಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ 1 ಕ್ವಿಂಟಾಲ್ ಚಿಕನ್, 1 ಸಾವಿರ ಮೊಟ್ಟೆ ಹಾಗೂ ಗೀ ರೈಸ್‌ನ ಭೋಜನ ಸಿದ್ಧಪಡಿಸಲಾಗಿತ್ತು.
ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು ಮಾತನಾಡಿ, ಕೆಂಪೇಗೌಡರ ದೂರದೃಷ್ಟಿ ಯೋಜನೆಯ ಕೊಡುಗೆಗಳು ಇಂದಿಗೂ ಜೀವಂತವಾಗಿವೆ. ರಾಜ್ಯದ ರಾಜಧಾನಿ ಬೆಂಗಳೂರು ಇಂದು ವರ್ಣಿಸಲಾಗದಷ್ಟು ಅಂದವಾಗಿ ಕಾಣಲು 500 ವರ್ಷಗಳ ಹಿಂದಿನ ಅವರ ಪರಿಕಲ್ಪನೆಯೇ ಕಾರಣ ಎಂದರು.
ಶ್ರೀ ಮಹಾಕಾಳಿ ದೇವಾಲಯದ ಶ್ರೀ ಗುರುದೇವ್, ಮುಖಂಡರಾದ ಎಂ.ಶೆಟ್ಟಹಳ್ಳಿ ಇಂದ್ರಕುಮಾರ್, ಅರುಣ್, ವಸಂತ್, ಗಣಂಗೂರು ಮಂಜುನಾಥ್, ತಮ್ಮಣ್ಣ ಸೇರಿದಂತೆ ಒಕ್ಕಲಿಗ ಸಮುದಾಯದ ನೂರಾರು ಮುಖಂಡರು ಉಪಸ್ಥಿತರಿದ್ದರು.