ಯಕ್ಷಗಾನ ಕಾಲಮಿತಿ: ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕು?

Yakshagana
Published on
‘ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸಬೇಕು, ಈಗಿನ ಸಂದರ್ಭದಲ್ಲಿ ಅದೇ ಸೂಕ್ತ’ ಎಂಬ ಅಭಿಪ್ರಾಯವೊಂದು ಹುಟ್ಟಿಕೊಂಡಿದೆ. ಜೊತೆಗೆ ಕಾಲಮಿತಿ ಬೇಕು-ಬೇಡ ಎನ್ನುವ ಚರ್ಚೆಯೂ ಉಂಟಾಗಿದೆ. ಯಕ್ಷಗಾನ ಕಲಾಭಿಮಾನಿಗಳು ಈ ಕುರಿತು ತಮ್ಮ ಅನಿಸಿಕೆಗಳನ್ನು ವಿಜಯವಾಣಿ ಜತೆ ಹಂಚಿಕೊಳ್ಳಬಹುದು. ಆಯ್ದ ಉತ್ತಮ ಬರಹಗಳನ್ನು http://www.vijayavani.net ಹಾಗೂ ವಿಜಯವಾಣಿಯ ಎಲ್ಲ ಡಿಜಿಟಲ್ ಪ್ಲ್ಯಾಟ್​ಫಾರ್ಮ್​ಗಳಲ್ಲೂ ಪ್ರಕಟಿಸಲಾಗುವುದು. ನಿಮ್ಮ ಬರಹ ಸುಮಾರು 300 ಪದಗಳಲ್ಲಿದ್ದರೆ ಸಾಕು. ಯಾರ ನಂಬಿಕೆ ಹಾಗೂ ಭಾವನೆಗೆ ಧಕ್ಕೆ ಬರದಂತೆ ವಿಷಯವನ್ನು ಪ್ರಸ್ತಾಪಿಸಿ. ನಿಮ್ಮ ಬರಹಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಾದ ವಿಳಾಸ, e-mail: vijayavanidigital@vrlmedia.com

| ಗಣಪತಿ ಹೆಗಡೆ ಕಪ್ಪೆಕೆರೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಕು ಮತ್ತು ಬಡಗು ಯಕ್ಷಗಾನ ಪ್ರಾಕಾರಗಳೆರಡನ್ನೂ ಸೇರಿ, ಸರಿಸುಮಾರು 50ಕ್ಕೂ ಹೆಚ್ಚು ಹರಕೆ ಬಯಲಾಟ ಮೇಳಗಳಿವೆ. ಇತ್ತೀಚಿನ ವರ್ಷಗಳವರೆಗೂ ಅವೆಲ್ಲ ರಾತ್ರಿ ಬೆಳಗಿನ ತನಕ ಕಾರ್ಯಕ್ರಮ ನಡೆಸುವ ಮೇಳಗಳು. ಈಗ ಸಾರ್ವತ್ರಿಕವಾಗಿ ಸಂಜೆ ಒಂದು ಸಮಯಕ್ಕೆ ಪ್ರಾರಂಭವಾಗಿ ರಾತ್ರಿ ಒಂದೋ ಅಥವಾ ಎರಡೋ ಗಂಟೆಯವರೆಗೆ ನಡೆದರೆ ಸಾಕೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ನಿದ್ರೆ, ಆಹಾರ ಮತ್ತು ಮೈಥುನ ಮನುಷ್ಯನ ದೇಹಧರ್ಮಕ್ಕೆ ಸಹಜ ಮತ್ತು ಅತ್ಯವಶ್ಯ. ಈ ಸಹಜ ಅಗತ್ಯಗಳನ್ನು ತ್ಯಜಿಸಿ, ದೈವ ಸಾಕ್ಷಾತ್ಕಾರಕ್ಕಾಗಿ ದೇವಾರಾಧನೆ ಮಾಡುವ ಕ್ರಮ ನಮ್ಮ ಸಂಸ್ಕೃತಿಯಲ್ಲಿ ಆಚರಣೆಯಲ್ಲಿದೆ. ನಿದ್ರೆಯನ್ನು ತ್ಯಜಿಸಿ ಜಾಗರಣೆ ಅಥವಾ ಬೆಳಕಿನ ಸೇವೆ, ಆಹಾರವನ್ನು ತ್ಯಜಿಸಿ ಉಪವಾಸ, ಹಾಗೆಯೇ ಮೈಥುನವನ್ನು ತ್ಯಜಿಸಿ ಸಂನ್ಯಾಸವೆಂಬ ದಾರಿ ಇದೆ. ಹಳ್ಳಿಗಳಲ್ಲಿ ದೂರದ ಮನೆಗಳಿಗೆ ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ಅಹೋರಾತ್ರಿ ಯಕ್ಷಗಾನ ವ್ಯವಸ್ಥೆ ಜಾರಿಗೆ ಬಂದಿದ್ದಲ್ಲ!! ನಮ್ಮಲ್ಲಿ ಒಂದು ಧಾರ್ಮಿಕ ವ್ಯವಸ್ಥೆ ಇದ್ದರೆ ಅದರೊಂದಿಗೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಸ್ಥೆಗಳೂ ಸಹ ಮಿಳಿತಗೊಂಡಿರುತ್ತವೆ. ಅಧ್ಯಾತ್ಮ ಅಗೋಚರವಾಗಿ ಇವುಗಳ ಹಿನ್ನೆಲೆಯಲ್ಲಿ ಇರುತ್ತದೆ.

ಇಷ್ಟು ಅರ್ಥಪೂರ್ಣ ವ್ಯವಸ್ಥೆಯ ರೂಪವನ್ನು ಹೊಂದಿರುವ ಹರಕೆ ಬಯಲಾಟಗಳ ಸ್ವರೂಪ ಯಾಕೆ ಬದಲಾಗಬೇಕು?? ಯಾಕೆಂದರೆ ಕಾಲಧರ್ಮದ ಕಾರಣದಿಂದಾಗಿ..!! ನಮ್ಮಲ್ಲಿ ಕಾಲಧರ್ಮಕ್ಕೆ ಅನುಗುಣವಾಗಿ ಆಚರಣೆಗಳು ಹೃಸ್ವ ಮತ್ತು ದೀರ್ಘವಾಗುವುದಿದೆ. ನಮ್ಮ ಕಡೆ ದೀಪಾವಳಿಯಲ್ಲಿ ದೀಪಾವಳಿ ಎಂದರೆ ಬೆಳಕಿನ ಹಬ್ಬ ಎಂಬುದನ್ನು ತೋರಿಸಲು ದೇವಸ್ಥಾನಗಳಲ್ಲಿ ಸಂಜೆಯ ಹೊತ್ತು ಹಣತೆ ಹಚ್ಚಿ 'ದೀಪಾರಾಧನೆ' ಎಂಬ ಆಚರಣೆ ಚಾಲ್ತಿಯಲ್ಲಿದೆ. ಇಷ್ಟಲ್ಲದೆ ಕಾರ್ತಿಕದಲ್ಲಿ ಮನೆಯ ಎದುರಿನ ತುಳಸಿಕಟ್ಟೆಯಲ್ಲಿ ಹಣತೆ ಹಚ್ಚುವ ರೂಢಿ ಇದೆ. ಇವೆಲ್ಲ ಯಾಕೆ ಹೇಳಿದೆನೆಂದರೆ, ಹರಕೆ ಮೇಳಗಳಲ್ಲೂ ಸಹ ನಾವು ಸಾಂಕೇತಿಕವಾಗಿ ಬೆಳಕಿನ ಸೇವೆ ಮಾಡಲು ಮಾರ್ಗೋಪಾಯಗಳಿವೆ.

ಇಂದಿನ ಬದಲಾದ ಜೀವನಶೈಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಯಕ್ಷಗಾನ ನಿರ್ದಿಷ್ಟ ಕಾಲಮಿತಿಗೆ ಒಳಪಡುವುದು ಸೂಕ್ತವೇ ಆಗಿದೆ. ಆದರೆ ಇದು ಯಕ್ಷಗಾನದ ಮೇಲೆ ಧನಾತ್ಮಕ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಯಕ್ಷಗಾನದ ಆಯಕಟ್ಟಿನ ಸ್ಥಳಗಳಲ್ಲಿ ಇರುವವರು ಯೋಚಿಸಿ ನಡೆಯಬೇಕಾಗಿದೆ. ಯಕ್ಷಗಾನದಂಥ ಕಲೆಗಳಿರುವುದೇ ದೇವರು, ಧರ್ಮ ಮತ್ತು ಅಧ್ಯಾತ್ಮದ ಚಿಂತನೆಗಳನ್ನು ಜನಮಾನಸದಲ್ಲಿ ಜೀವಂತವಾಗಿರಿಸಲು. ಕೇವಲ ಗಮ್ಮತ್ತಿಗಾಗಿ ಹರಕೆ ಮೇಳದ ಆಟಗಳಿಗೆ ಪ್ರೇಕ್ಷಕರು ಬಂದರೆ ಸಾಕೆ??

ಒಬ್ಬರು ಬಯಲಾಟದ ಹಿರಿಯ ಕಲಾವಿದರು 'ಮಂದಗಮನೆ' ಎಂಬ ಶಬ್ದಕ್ಕೆ ಕುದುರೆಯ ಹಸ್ತಾಭಿನಯ ಮಾಡಿ ತೋರಿಸಿದರು. ಇದು ಆಭಾಸವಲ್ಲದೆ ಮತ್ತೇನು?? ಬಯಲಾಟದ ಮೇಳಗಳ ಕಲಾವಿದರು ವೃತ್ತಿ ಮೇಳಗಳ ಕಲಾವಿದರ ಕಾಪಿ ಮಾಡಲು ಹೊರಟಿದ್ದಾರೆ. ಎಷ್ಟೆಂದರೂ ಅವರೂ ಕಲಾವಿದರು ಮತ್ತು ಇವರೂ ಕಲಾವಿದರು. ಯಶಸ್ಸು ಪ್ರತಿಯೊಬ್ಬ ಕಲಾವಿದರೂ ಬಯಸುವಂಥದ್ದು. ಪ್ರತಿಯೊಂದು ಮೇಳದಲ್ಲಿ ಮೂರ್ನಾಲ್ಕು ಕಣ್ಣಿಮನೆಯವರ ಕಾಪಿ ಹೊಡೆಯುವ ಕಲಾವಿದರಿದ್ದಾರೆ. ಕೇವಲ ಕಣ್ಣಿಯವರ ಕಾಪಿ ಮಾಡಿದರೆ ಮಾತ್ರ ಯಶಸ್ಸು ಎಂಬ ಭ್ರಮೆ ದೂರವಾಗಲಿ. ಕಣ್ಣಿಯವರು ಪಾತ್ರಗಳ ಮೂಲಕ ಉಂಟುಮಾಡುತ್ತಿದ್ದ ಭಾವಸ್ಫುರಣೆ ಬಹಳ ಮುಖ್ಯ. ಸಾಂಪ್ರದಾಯಿಕ ನೃತ್ಯ ಕ್ರಮ ಕಣ್ಮರೆಯಾಗುತ್ತಿದೆ. ಯಕ್ಷಗಾನದ ಸಾಂಪ್ರದಾಯಿಕ ಪ್ರೇಕ್ಷಕರು ಈ ಕಲೆಯಿಂದ ದೂರವಾಗುತ್ತಿದ್ದಾರೆ.. ಈ ಕುರಿತು ಅವಲೋಕನದ ಅನಿವಾರ್ಯತೆ ಇದೆ. ಹರಕೆ ಮೇಳಗಳಿಗೆ ಮಹಾಕಾವ್ಯ ಮತ್ತು ಪುರಾಣದ ಹೊರತಾದ ಹೊಸ ಪ್ರಸಂಗಗಳ ಅನಿವಾರ್ಯತೆ ಏನು?? ಉಳಿಯಬೇಕಾದ್ದನ್ನು ಉಳಿಸಿ ಬೆಳೆಸೋಣ. ಕಾಲಮಿತಿಗೆ ಒಳಪಡುವ ಈ ಸಂದರ್ಭದಲ್ಲಿ ಹರಕೆ ಮೇಳಗಳು ಒಂದು ರಂಗಭೂಮಿಯಾಗಿ ಯಕ್ಷಗಾನವನ್ನು ನೋಡಬೇಕು. ಮೇಳಗಳು ರಂಗಕೇಂದ್ರಗಳಂತೆ ಜೀವ ತಳೆಯಬೇಕು.. ಪ್ರತಿವರ್ಷ ತಿರುಗಾಟಕ್ಕಿಂತ ಮೊದಲು ಪೌರಾಣಿಕ ಪ್ರಸಂಗಗಳಿಗೆ ಜೀವ ನೀಡಲು ಪುನಶ್ಚೇತನ ಶಿಬಿರ ನಡೆಸಬೇಕು. ನಮ್ಮಲ್ಲಿ ರಂಗಕರ್ಮಿಗಳು ಹುಟ್ಟಿಕೊಳ್ಳಲಿ.

ಇನ್ನು ಕೆಲವು ವರ್ಷ ಪ್ರೇಕ್ಷಕರನ್ನು ಕಟ್ಟಲು ಯಕ್ಷಗಾನದವರು ತಮ್ಮ ಚಿಂತನೆ ಮತ್ತು ಸಂಪನ್ಮೂಲಗಳನ್ನು ಹೂಡಿಕೆ ಮಾಡಬೇಕಾಗಿದೆ. ಯಕ್ಷಗಾನ, ಕಾಲಮಿತಿಗೆ ಒಳಪಡುವುದರಿಂದ ಕಲೆಯ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net