

ತಿ.ನರಸೀಪುರ: ಪ್ರವಾಸಿ ತಾಣವೂ ಆಗಿರುವ ತಿ.ನರಸೀಪುರ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿ 4-5 ವರ್ಷಗಳಾದರೂ ಪಟ್ಟಣದ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗದೆ ಉಳಿದಿವೆ.
ಬೈರಾಪುರ ಹಾಗೂ ಆಲಗೂಡು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗೆ ವಿಲೀನಗೊಳಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಯಿತು. ಆದರೆ ಪಟ್ಟಣದ ಅಭಿವೃದ್ಧಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹೊರ ಭಾಗದಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಗಳು ಪರವಾಗಿಲ್ಲ ಎನಿಸುವುದಾದರೂ ಪಟ್ಟಣದ ಬಡಾವಣೆಯ ಹಲವಾರು ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ.
ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿದ್ದ ಹೊಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲಿ ಕೆಲವೆಡೆ ಸಿಸಿ ರಸ್ತೆಗಳು, ಚರಂಡಿ ಕಾಮಗಾರಿ ಆಗಿದೆ ಆದರೆ ಬಹುತೇಕ ಕಡೆ ಅಪೂರ್ಣವಾಗಿ ಜನರು ಸಂಚಾರಕ್ಕೆ ಪರಿತಪಿಸುವಂತಾಗಿದೆ.
ಪುರಸಭೆಗೆ ಸೇರಿರುವ ವರುಣ ಕ್ಷೇತ್ರ ವ್ಯಾಪ್ತಿಯ ವಿದ್ಯಾನಗರದ ಹಾಗೂ ತಾಲೂಕು ಕಚೇರಿ ಹಿಂಭಾಗ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಿರ್ಮಾಣವಾಗದೆ ಅಲ್ಲಿನಿ ನಿವಾಸಿಗಳಿಗೆ ತೊಂದರೆಯಾಗಿದೆ. ಬಡಾವಣೆಯ ಉಳಿದ ಭಾಗಗಳಲ್ಲಿ ರಸ್ತೆಯೂ ಇಲ್ಲ. ಚರಂಡಿ ಸೌಲಭ್ಯವೂ ಇಲ್ಲದೆ ಬಡಾವಣೆಯ ನಿವಾಸಿಗಳು ತಮ್ಮ ಮನೆಯ ನೀರನ್ನು ನಿವೇಶನಗಳು, ರಸ್ತೆಗಳಿಗೆ ಹರಿಯ ಬಿಡುತ್ತಿದ್ದಾರೆ. ಬಡಾವಣೆಯ ಮನೆಗಳ ಅಕ್ಕಪಕ್ಕದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ನಾಮಫಲಕಗಳಿಲ್ಲ: ತಾಲೂಕು ಕೇಂದ್ರವಾಗಿರುವ ಪಟ್ಟಣದ ಯಾವುದೇ ರಸ್ತೆ ಗಳಾಗಲಿ ಅಥವಾ ಬಡಾವಣೆಗಳಲ್ಲಾಗಲಿ ಒಂದು ನಾಮಫಲಕವನ್ನೂ ಅಳವಡಿಸಿಲ್ಲ ಎಂಬುದು ಸಾರ್ವಜನಿಕ ಆರೋಪವಾಗಿದೆ.
ಕೆಲವು ಪ್ರಭಾವಿಗಳು ನಿವೇಶನ ನಿರ್ಮಾಣ ಮಾಡಿರುವ ಜಾಗದ ಸಮೀಪದ ರಸ್ತೆಯನ್ನು ಅಕ್ರಮಿಸಿಕೊಂಡಿರುವುದು ಬಡಾವಣೆಯಲ್ಲಿ ಕಂಡುಬಂದರೂ ಪುರಸಭಾ ಅಧಿಕಾರಿಗಳು ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪುರಸಭೆ ವ್ಯಾಪ್ತಿಗೆ ಬರುವ ಪಟ್ಟಣದ ಕೆಲವು ಬಡಾವಣೆಗಳಾದ ವಿದ್ಯಾನಗರ, ಹೌಸಿಂಗ್ ಬೋರ್ಡ್ ಹಾಗೂ ತಾಲೂಕು ಕಚೇರಿ ಹಿಂಭಾಗ ಕಾಮಗಾರಿಗಳನ್ನು ಕೈಗೊಳ್ಳಲು ಚರ್ಚಿಸಲಾಗಿದೆ. ರಸ್ತೆ, ಚರಂಡಿ ನಿರ್ಮಿಸಲು ಸೂಕ್ತ ಸ್ಥಳಾವಕಾಶವಿರುವ ಕಡೆ ಕಾಮಗಾರಿ ಆದೇಶಗಳನ್ನು ನೀಡಲಾಗುತ್ತಿದೆ ಮತ್ತು ಕೆಲವು ಬಡಾವಣೆಗಳಲ್ಲಿ ಒತ್ತುವರಿಯಾಗಿರುವ ನಿರ್ಮಾಣ ಹಂತದ ಕಟ್ಟಡಗಳನ್ನು ಯಾವುದೇ ಪ್ರಭಾವಿಗಳಾದರೂ ನೋಟಿಸ್ ನೀಡಿ ಕಾನೂನಿ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ.
ಅಶೋಕ್, ಪುರಸಭಾ ಮುಖ್ಯಾಧಿಕಾರಿ
ವಿದ್ಯಾನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಚರಂಡಿಗಳು ಆಗಿವೆಯಾದರೂ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ಬಡಾವಣೆಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಬಾಕಿ ಇರುವ ರಸ್ತೆಗಳು, ಒಳಚರಂಡಿ ಅಭಿವೃದ್ಧಿಯಾಗಬೇಕಿದೆ.
ಹಾಲಿನ ಡೈರಿ ಗುರುಮೂರ್ತಿ, ಬಡಾವಣೆ ನಿವಾಸಿ, ತಿ.ನರಸೀಪುರ