ಡಿಸಿಎಂ ಹುದ್ದೆ ಬೇಕೆನ್ನುವವರು ಹೈಕಮಾಂಡ್ ಬಳಿ ಕೇಳಲಿ: ಸಚಿವ ಪ್ರಿಯಾಂಕ್ ಖರ್ಗೆ

Priyank Kharge
Published on

ಬೆಂಗಳೂರು: ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ಬಹಿರಂಗ ಚರ್ಚೆ ಅನಗತ್ಯ, ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವವರು ನೇರವಾಗಿ ಹೈಕಮಾಂಡ್ ಬಳಿಗೆ ಹೋಗಿ ಕೇಳಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಿಡಿಮಿಡಿಗೊಂಡರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಹುದ್ದೆಗಳು ಸೃಜನೆಯಿಂದ ಎಲ್ಲ ಸರಿಹೋಗುತ್ತದೆ ಎನ್ನುವುದಾದರೆ ಸಿಎಂ ಹೊರತುಪಡಿಸಿ ಇಡೀ ಮಂತ್ರಿ ಮಂಡಲದ ಸದಸ್ಯರನ್ನೇ ಡಿಸಿಎಂ ಮಾಡಿದರಾಯಿತು ಎಂದು ತಿವಿದರು.

ಕೆಲವರು ವೈಯಕ್ತಿಕವಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಕೇಳುವ ಹಕ್ಕಿದೆ. ನಿಮ್ಮ (ಪತ್ರಕರ್ತರು) ಮುಂದೆ ಕೇಳಿದರೆ ಆಗುತ್ತದೆಯೇ ? ಹೈಕಮಾಂಡ್ ಬಳಿಗೆ ತೆರಳಿ ಡಿಸಿಎಂ ಹುದ್ದೆ ಕೇಳಲು ಯಾರೂ ಬೇಡವೆಂದಿಲ್ಲ.

ಲೋಕಸಭೆ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಆ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ನಮ್ಮ ಕೆಲಸವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನೀಟ್ ಪರೀಕ್ಷೆ, ಸರ್ಕಾರ ಚಿಂತನೆ

ರಾಜ್ಯದಲ್ಲಿ ನೀಟ್ ಪರೀಕ್ಷೆ ವಿಚಾರವಾಗಿ ಸರ್ಕಾರ ಯಾವ ನಿರ್ದಾರಕ್ಕೆ ಬರಬೇಕು ಎಂಬ ಬಗ್ಗೆ ಸಿಎಂ, ಡಿಸಿಎಂ. ವೈದ್ಯಕೀಯ ಶಿಕ್ಷಣ ಸಚಿವರು ಚರ್ಚಿಸಿ ನಿರ್ಧರಿಸುತ್ತಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 25 ಲಕ್ಷ ಯುವಜನ ಭವಿಷ್ಯವನ್ನು ಕೇಂದ್ರ ಸರ್ಕಾರ ಹಾಳು ಮಾಡಿದ್ದು, ಈ ಬಗ್ಗೆ ರಾಜ್ಯ ಬಿಜೆಪಿ ಯಾವೊಬ್ಬ ನಾಯಕರು ಮಾತನಾಡುತ್ತಿಲ್ಲವೆಂದು ಪ್ರಿಯಾಂಕ್ ಖರ್ಗೆ ಕಾಲೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net