ರೌಡಿಶೀಟರ್‌ಗಳಿಗೆ ಬಿಲ್ಡಪ್ ಕೊಟ್ಟವರು ರೌಡಿಶೀಟರ್ ಪಟ್ಟಿಗೆ

Social Media
Published on

ಬೆಂಗಳೂರು: ರೌಡಿಶೀಟರ್‌ಗಳಿಗೆ ಬಿಲ್ಡಪ್ ಕೊಡುವಂತಹ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ೮ ಮಂದಿಯ ವಿರುದ್ಧ ದಕ್ಷಿಣ ವಿಭಾಗದ ಪೊಲೀಸರು ರೌಡಿಪಟ್ಟಿ ತೆರೆದಿದ್ದಾರೆ. ಇದರಲ್ಲಿ ಒರ್ವ ಯುವತಿ ಮತ್ತು ಒರ್ವ ಅಪ್ರಾಪ್ತ ಇದ್ದಾನೆ.

ಸರ್ಜಾಪುರದ ದೀಪಕ್(೨೨ ), ಯಲಹಂಕದ ಕುಶಾಲ್ (೨೦ ), ಬೊಮ್ಮನಹಳ್ಳಿ ಕುಮಾರಿ ಕೈಸರ್ (೨೧) ಜಯನಗರದ ಮಂಜುನಾಥ್ ಅಲಿಯಾಸ್ ದೊಣ್ಣೆ ಮಂಜ (೩೧) , ಜಯನಗರದ ಶಂಕರ್ (೩೨) ಚಿಕ್ಕಬಳ್ಳಾಪುರದ ಮನೋಜ್ (೨೨), ಆನೇಕಲ್ನ ವೇಣು (೧೯) ಮತ್ತು ಅಪ್ರಾಪ್ತ ಬಾಲಕನ ವಿರುದ್ಧ ಬಡ್ಡಿಂಗ್ ರೌಡಿಶೀಟ್ ಓಪನ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಬೇಕು ಎಂಬ ಆಸೆಗೆ ಬಿದ್ದಿದ್ದ ಆರೋಪಿಗಳು ರೌಡಿಗಳ ೆಟೋ ಮತ್ತು ವಿಡಿಯೋಗಳಿಗೆ ಬಿಲ್ಡಪ್ ಕೊಟ್ಟು ಅವರನ್ನು ಹೀರೋ ರೀತಿ ಬಿಂಬಿಸುತ್ತಿದ್ದರು. ಈ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು.

ರೌಡಿ ಫ್ಯಾನ್ ಕ್ರೇಜ್ಗೆ ಕಡಿವಾಣ ಹಾಕಿದ ಖಾಕಿ:

ಸೋಷಿಯಲ್ ಮೀಡಿಯಾದಲ್ಲಿ ರೌಡಿ ಫ್ಯಾನ್ ಕ್ರೇಜ್ಗೆ ಕಡಿವಾಣ ಹಾಕಲು ಯೋಜನೆ ರೂಪಿಸಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ರೌಡಿಗಳಿಗೆ ಬಿಲ್ಡಪ್ ಕೊಟ್ಟು ವಿಡಿಯೋ ಮಾಡಿ ಹರಿಬಿಡುವವರ ವಿರುದ್ಧ ಇದೀಗ ರೌಡಿಪಟ್ಟಿ ಅಸ್ತ್ರ ಪ್ರಯೋಗಿಸಿದ್ದಾರೆ. ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ ಮೃತ ಮಹೇಶ್ ಸಿದ್ದಾಪುರ ಸಂಬಂಧ ಫ್ಯಾನ್ ಪೇಜಸ್‌ಗಳನ್ನು ಕ್ರಿಯೇಟ್ ಮಾಡಲಾಗಿತ್ತು. ಅದರಲ್ಲಿ ಪರಸ್ಪರ ವೈಷಮ್ಯ ಬರುವ ರೀತಿ ಮತ್ತು ಸಹಾನುಭೂತಿ ವಿಡಿಯೋಗಳನ್ನು ಹರಿಬಿಡಲಾಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋಗಳು ವೈರಲ್ ಆಗಿದ್ದರಿಂದ ಅಂತಹ ಸೋಷಿಯಲ್ ಮೀಡಿಯಾ ಪೇಜ್ಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಇದರ ಹಿಂದೆ ಹಲವು ವಿದ್ಯಾರ್ಥಿಗಳು ಇರುವುದು ಬೆಳಕಿಗೆ ಬಂದಿತ್ತು. ಹಲವರ ವಿಚಾರಣೆ ನಡೆಸಿದ ಪೊಲೀಸರು ಇದೀಗ ೮ ಜನರ ವಿರುದ್ಧ ರೌಡಿ ಪಟ್ಟಿ ತೆರೆದಿದ್ದಾರೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾತಕ ಲೋಕಕ್ಕೆ ಆಹ್ವಾನ!

ರೌಡಿಗಳು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳಿಗೆ ಹಾಡುಗಳನ್ನು ಹಾಕಿ ಬಿಲ್ಡಪ್ ನೀಡುವ ರೀಲ್ಸ್ಗಳನ್ನು ಆರೋಪಿಗಳು ಮಾಡುತ್ತಿದ್ದರು. ರೌಡಿಗಳ ಫೋಟೋಗೆ ಸಿನಿಮಾ ಡೈಲಾಗ್ ಹಾಕಿ ರೀಲ್ಸ್, ರೌಡಿಗಳ ಕಟೌಟ್‌ಗಳಿಗೆ ಹಾರ, ಹಾಲು ಹಾಕುವ ವಿಡಿಯೋಗಳು, ರೌಡಿಗಳ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುತ್ತಿರುವ ವಿಡಿಯೋಗಳು ಹಾಗೂ ರೌಡಿಗಳಿಗೆ ಅಣ್ಣ, ಬಾಸ್, ಕಿಂಗ್ ಎಂದು ಸಂಬೋದಿಸುತ್ತಿದ್ದರು. ಎನ್ ಬಾಸ್, ಎಂ ಬಾಸ್ ಎಂಬ ಹೆಸರಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಮಾರಕಾಸಗಳನ್ನು ಪ್ರದರ್ಶಿಸುವ ವಿಡಿಯೋಗಳು, ಸಿನಿಮಾ ಡೈಲಾಗ್ ಮತ್ತು ಹಾಡುಗಳನ್ನು ಬಳಸಿಕೊಂಡು ಯುವ ಪೀಳಿಗೆಯನ್ನು ರೌಡಿಸಂ ಅಥವಾ ಪಾತಕ ಲೋಕದ ಕಡೆ ಆಕರ್ಷಿತರಾಗುವಂತೆ ಪ್ರಚೋದಿಸುವ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net