ಸಂವಿಧಾನಕ್ಕೆ ಅಗೌರವ ತೋರುವವರ ರಕ್ಷಣೆ ಸಲ್ಲ : ಹೈಕೋರ್ಟ್ ಅಭಿಮತ

highcourt
Published on

ಬೆಂಗಳೂರು : ರಾಷ್ಟ್ರದ ಸೌರ್ವಭೌಮತೆ, ಏಕತೆಗೆ ಅಪಾಯವೊಡ್ಡುವವರ ರಕ್ಷಣೆಗೆ ಸಂವಿಧಾನದ ಕಲಂ 21 (ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನದ ಹಕ್ಕು) ಬಳಕೆ ಮಾಡಲಾಗದು ಎಂದು ಹೇಳಿರುವ ಹೈಕೋರ್ಟ್, ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್)ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದೆ.


ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಆರೋಪ ಎದುರಿಸುತ್ತಿರುವ ಮಜೀನ್ ಅಬ್ದುಲ್ ರೆಹಮಾನ್ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ.
ದೇಶ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವಂತಹ ಜನರಿಂದ ರಾಷ್ಟ್ರ ಮತ್ತು ಸಮಾಜ ರಕ್ಷಿಸುವುದು ಸಾಂವಿಧಾನಿಕ ನ್ಯಾಯಾಲಯಗಳ ಕರ್ತವ್ಯ. ದೇಶವೇ ಇಲ್ಲದಿದ್ದರೆ ಸಂವಿಧಾನವಿರಲು ಹೇಗೆ ಸಾಧ್ಯ ಎಂದು ನ್ಯಾಯಪೀಠ ಹೇಳಿದೆ.


ಸಂವಿಧಾನದ ಕಲಂ 21 ಅನ್ನು ಕಾನೂನಿನ ಬಗ್ಗೆ ಸ್ವಲ್ಪವೂ ಗೌರವ ನೀಡದವರಿಗೆ ಮತ್ತು ದೇಶದ ಸಾರ್ವಭೌಮತೆ ಹಾಗೂ ಏಕತೆಗೆ ಅಪಾಯವೊಡುವವರ ರಕ್ಷಣೆಗಾಗಿ ಹೆಚ್ಚು ವಿಸ್ತರಿಸಲಾಗದು. ಕಲಂ 51 (ಎ)(ಎ) ಪ್ರಕಾರ ಭಾರತದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಅದರ ತತ್ವಗಳು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಗೌರವಿಸಬೇಕು. ಅದೇ ಕಲಂನ ಸಿ ವಿಭಾಗದಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಘನತೆ ಎತ್ತಿಹಿಡಿಯಬೇಕು. ಇವು ಪ್ರತಿಯೊಬ್ಬ ಪ್ರಜೆಯ ಮೂಲ ಕರ್ತವ್ಯಗಳಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಪ್ರಕರಣದಲ್ಲಿ ಅರ್ಜಿದಾರ ಭಾರತ ಪ್ರಜೆಯಾಗಿದ್ದರೂ ನಿಷೇಧಿತ ಸಂಘಟನೆಯೊಂದರ ಸದಸ್ಯರಾಗಿ ಭಾರತದ ವಿರುದ್ಧ ಸಮರ ಹೂಡಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಆದರೂ ಸಂವಿಧಾನದಡಿ ರಕ್ಷಣೆ ಕೋರುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net