ಮನವಿ ನೀಡಲು ಬಂದವರು ಪೊಲೀಸ್ ವಶಕ್ಕೆ!

ggp1
Published on

ಬೆಂಗಳೂರು: ಪೊಲೀಸ್ ನೇಮಕ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಗೃಹ ಸಚಿವರ ಭೇಟಿಗೆ ಮನೆಗೆ ಬಂದ ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣ ನಡೆಯಿತು.

ಸದಾಶಿವನಗರದ ಗೃಹ ಸಚಿವ ಡಾ.ಪರಮೇಶ್ವರ ಅವರ ನಿವಾಸಕ್ಕೆ ಪೊಲೀಸ್ ನೇಮಕ ಆಕಾಂಕ್ಷಿ ಕೆಲವರು ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಲು ಬಂದಿದ್ದರು. ಆಗ ಪೊಲೀಸರು ಮನವಿ ಮಾಡಲು ಅವಕಾಶ ನಿರಾಕರಿಸಿದರು. ಈ ನಡುವೆ ಪೊಲೀಸರು ಹಾಗೂ ಮನವಿ ಮಾಡಲು ಬಂದವರ ನಡುವೆ ಮಾತಿನ ಚಕಮಕಿ. ಆಗ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದ ಘಟಕೆ ನಡೆಯಿತು.

ಅಭ್ಯರ್ಥಿಗಳ ವಿರುದ್ಧ ಇನ್ಸ್‌ಪೆಕ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದೂ ಅಲ್ಲದೆ, ಜೋರು ಧ್ವನಿಯಲ್ಲಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದರು. ಬಳಿಕ ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಇದರಿಂದ ಗೃಹ ಸಚಿವರ ನಿವಾಸದ ಹೊರಗೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಗೃಹ ಸಚಿವರಿಂದ ಇನ್ಸ್‌ಪೆಕ್ಟರ್‌ಗೆ ತರಾಟೆ

ಮನೆ ಬಳಿ ಮನವಿ ನೀಡಲು ಬಂದಿದ್ದವರನ್ನು ಕರೆದೊಯ್ದ ಸ್ಥಳೀಯ ಪೊಲೀಸರನ್ನು ಗೃಹ ಸಚಿವ ಪರಮೇಶ್ವರ ಅವರು ತರಾಟೆಗೆ ತೆಗೆದುಕೊಂಡರು. ಜನರು ಅಹವಾಲು ನೀಡಲು ಬಂದಾಗ ಸುಮ್ಮನೆ ನಿಂತುಕೊಂಡು ನೋಡಬೇಕು. ಇನ್ನೊಮ್ಮೆ ಆ ರೀತಿ ನಡೆದುಕೊಳ್ಳದಂತೆ ಸೂಚಿಸಿದರು.

ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಬಗೆಹರಿಯುತ್ತದೆ ಎಂಬ ಉದ್ದೇಶದಿಂದ ಬರುತ್ತಾರೆ. ನಮ್ಮ ಬಳಿಗೆ ಬಾರದಿದ್ದರೆ, ಇನ್ಯಾರ ಬಳಿ ಹೋಗಲು ಸಾಧ್ಯ. ಸುಮ್ಮನೆ ನಿಂತುಕೊಂಡು ನೋಡಬೇಕು ಎಂದು ಸದಾಶಿವನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ಡಾ.ಪರಮೇಶ್ವರ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net