ಕೋರ್ಟ್ ಆದೇಶ ಉಲ್ಲಂಸಿ ಲಾಭ ಪಡೆಯುವವರು ಕ್ಷಮೆಗೆ ಅರ್ಹರಲ್ಲ : ಹೈಕೋರ್ಟ್ ಅಭಿಮತ

Published on

ಬೆಂಗಳೂರು: ಬೇರೆಯವರ ಜಮೀನು ಕಬಳಿಕೆ ಮಾಡಿ ಐದು ವರ್ಷಗಳ ಕಾಲ ಬಾಡಿಗೆ ನೀಡದೆ ಸ್ಥಳ ತೆರವಿಗಾಗಿ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದ ಪ್ರತಿವಾದಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಜತೆಗೆ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಸಿ ಲಾಭ ಪಡೆಯುವವರು ಕ್ಷಮೆಗೆ ಅರ್ಹರಲ್ಲ ಎಂದಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ವೇಣುಗೋಪಾಲ ಕೃಷ್ಣಮೂರ್ತಿ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಸ್ಥಳದಲ್ಲಿ ಶಾಲೆಯನ್ನು ನಡೆಸುತ್ತಿದ್ದ ಪ್ರತಿವಾದಿ ಕಳೆದ ಐದು ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ. 2023ರಲ್ಲಿ ಬಾಡಿಗೆ ಮೊತ್ತ ಠೇವಣಿ ಇಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಪಾವತಿಗೆ ಮುಂದಾಗಿಲ್ಲ. ಹೈಕೋರ್ಟ್ ಸಹ ಬಾಡಿಗೆ ಠೇವಣಿ ಇಡಲು ಸೂಚಿಸಿದೆ.

ಆದರೂ, ಪಾವತಿಗೆ ಮಾಡಿಲ್ಲ. ಈ ಬೆಳವಣಿಗೆ ಪ್ರತಿವಾದಿಯ ಹಠಮಾರಿತನವನ್ನು ತೋರಿಸುತ್ತದೆ. ಹೀಗಾಗಿ ಪ್ರತಿವಾದಿಯ ವಾದಾಂಶಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ಅಕ್ರಮವಾಗಿ ನೆಲೆಯೂರಿದ್ದಾರೆ:

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ತೇಜಸ್ವಿನಿ 5 ವರ್ಷಗಳಿಂದ ಬಾಡಿಗೆ ಪಾವತಿಸದೆ ಅಕ್ರಮವಾಗಿ ನೆಲೆಸಿದ್ದಾರೆ. ಈವರೆಗೂ ಒಟ್ಟು 50 ಲಕ್ಷ ರೂ.ಗಳಿಗೂ ಹೆಚ್ಚು ಬಾಡಿಗೆ ಬಾಕಿಯಿದೆ. ಬಾಡಿಗೆ ಠೇವಣಿ ಇಡುವ ಸಂಬಂಧ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಮತ್ತೊಂದು ಪೀಠ ವಜಾಗೊಳಿಸಿದೆ. ಆದರೂ ಬಾಡಿಗೆ ಪಾವತಿಸಿಲ್ಲ. 2003ರಲ್ಲಿ ಶಾಲೆಯ ಪರವಾನಗಿಯನ್ನು ರದ್ದುಪಡಿಸಲಾಗಿದ್ದು, ಯಾವುದೇ ಶಾಲೆಯನ್ನು ನಡೆಸುತ್ತಿಲ್ಲ. ಆದರೆ ಈವರೆಗೂ ಬಾಡಿಗೆ ನೀಡುತ್ತಿಲ್ಲ. ಹೀಗಾಗಿ, ಪ್ರತಿವಾದಿಯ ವಾದಾಂಶಗಳನ್ನು ರದ್ದುಗೊಳಿಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net