ದೇವರನ್ನು ನಂಬಿದವರಿಗೆ ಯಾವ ಭಯವೂ ಇರದು

Chaturmasya in Holehonur
ಮೂಲರಾಮನ ಪಾದಯಾತ್ರೆಯ ಸಮಾರೋಪ ಹೊಳೆಹೊನ್ನೂರಿನ ಅಂಜನೇಯ ದೇವಸ್ಥಾನದ ಬಳಿ ನಡೆಯಿತು. ಈ ವೇಳೆ ಶ್ರೀ ಸತ್ಯಾತ್ಮತೀರ್ಥರು ಆಶೀರ್ವಚನ ನೀಡಿದರು.
Published on

ಶಿವಮೊಗ್ಗ: ದೇವರನ್ನು ನಂಬಿರುವ ವ್ಯಕ್ತಿಗಳಿಗೆ ಯಾವ ಭಯವೂ ಇರುವುದಿಲ್ಲ. ಅವರು ಎಂತಹ ಸಂದರ್ಭದಲ್ಲೂ ಸಮಚಿತ್ತದಿಂದ ಇರುತ್ತಾರೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.

ಹೊಳೆಹೊನ್ನೂರಿನಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ಅಂಗವಾಗಿ ಶನಿವಾರದ ವಿದ್ವತ್ ಸಭೆಯಲ್ಲಿ ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಶ್ರೀಕೃಷ್ಣನ ತಂದೆ ವಸುದೇವ ದೇವರನ್ನು ನಂಬಿದ್ದ. ಆತ ಜ್ಞಾನಿಯಾಗಿದ್ದ. ಕಂಸನ ವಧೆಗೆ ಅಶರೀರವಾಣಿ ಆಗಿರುವುದು ಕೂಡ ದೇವರಿಂದಲೇ ಎಂಬ ಅರಿವೂ ಅವನಿಗಿತ್ತು. ತನ್ನ ಹೆಂಡತಿ ರಕ್ಷಣೆಯ ಸಂಪೂರ್ಣ ಭಾರವನ್ನು ದೇವರ ಮೇಲೆಯೇ ಹಾಕಿದ್ದ. ಹೀಗಾಗಿ ದೇವಕಿಯ ವಧೆಗೆ ಕಂಸ ಖಡ್ಗ ಹಿಡಿದು ಮುಂದಾದಾಗಲೂ ವಸುದೇವ ವಿಚಲಿತನಾಗಲಿಲ್ಲ ಎಂದರು.
ಸ್ವಲ್ಪ ಕಷ್ಟ ಬಂದಾಗ ಕುಗ್ಗುವವರು ಮತ್ತು ಸ್ವಲ್ಪ ಸುಖ ಬಂದಾಗ ಹಿಗ್ಗುವವರನ್ನು ನಾವು ನೋಡುತ್ತೇವೆ. ಅವರಲ್ಲಿ ಸ್ಥಿಮಿತತೆಯೇ ಇರುವುದಿಲ್ಲ. ಆದರೆ ಅಧ್ಯಾತ್ಮ ಮಾರ್ಗದಲ್ಲಿ ನಡೆದವನ ಸ್ಥಿತಿ ನೋಡಿ. ವಸುದೇವನ ಮನಸ್ಥಿತಿಯಲ್ಲಿನ ಸಮಾನತೆ, ಸ್ಥಿಮಿತತೆ, ಗಾಂಭೀರ್ಯ, ಸಮಯೋಚಿತ ಪ್ರಜ್ಞೆಯನ್ನು ಭಾಗವತ ತಿಳಿಸುತ್ತಿದೆ. ಧರ್ಮದ ಆಚರಣೆ, ತತ್ವಜ್ಞಾನದ ಮಾತು, ಉಪದೇಶ ಇವೆಲ್ಲ ಶಾಂತವಾದ ಸ್ಥಿತಿಯಲ್ಲಿ, ನದೀ ತೀರದಲ್ಲಿ ಸಾಧ್ಯ ಎಂದು ತಿಳಿಸಿದರು.
ಸಂಜೀವಾಚಾರ್ಯ ಪರ್ವತೀಕರ್ ಪ್ರವಚನ ನೀಡಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಆನಂದಾಚಾರ್ಯ ಮಹಿಷಿ, ಲಕ್ಷ್ಮೀನರಸಿಂಹಾಚಾರ್ಯ ಉಪಸ್ಥಿತರಿದ್ದರು.

ಮೂಲರಾಮನ ಪಾದಯಾತ್ರೆ ಸಂಪನ್ನ
ಸಂಗಮ ಕ್ಷೇತ್ರವಾದ ಕೂಡಲಿಯಿಂದ ಹೊಳೆಹೊನ್ನೂರುವರೆಗೆ ನೂರಾರು ಭಕ್ತರು ಭಾನುವಾರ ಬೆಳಗ್ಗೆ ಮೂಲರಾಮನ ಪಾದಯಾತ್ರೆ ನಡೆಸಿದರು. ಬೆಳಗ್ಗೆ 7 ಗಂಟೆಗೆ ಕೂಡಲಿ ನರಸಿಂಹ ದೇವರ ಸನ್ನಿಧಾನದಿಂದ ಪಾದಯಾತ್ರೆ ಆರಂಭಿಸಿದ ಭಕ್ತರು ಅರ್ಧ ಗಂಟೆಯಲ್ಲಿ ಹೊಳೆಹೊನ್ನೂರು ತಲುಪಿದರು. ಆಂಜನೇಯ ದೇವಸ್ಥಾನದ ಎದುರು ಶ್ರೀ ಸತ್ಯಾತ್ಮ ತೀರ್ಥರು ಪಾದಯಾತ್ರಿಗಳಿಗೆ ಅನುಗ್ರಹ ಸಂದೇಶ ನೀಡಿದರು.
ದೇವರ ದರ್ಶನಕ್ಕಾಗಿ ಮಾಡುವ ಪಾದಯಾತ್ರೆಯಿಂದ ತೀರ್ಥಕ್ಷೇತ್ರದ ದರ್ಶನ ಮಾಡಿದ ಪುಣ್ಯ ಲಭಿಸುತ್ತದೆ. ಎಲ್ಲರೂ ದೇವರ ಸ್ಮರಣೆ ಮಾಡಿಕೊಂಡು ಪಾದಯಾತ್ರೆ ಮಾಡಿದ್ದೀರಿ. ನಿಮ್ಮೆಲ್ಲರಿಗೆ ದೇವರು ಆರೋಗ್ಯ ಭಾಗ್ಯ ನೀಡಲಿ ಎಂದರು.
ನಂತರ ಶ್ರೀಗಳಿಗೆ ಪಾದಪೂಜೆ, ಭಕ್ತರಿಗೆ ತಪ್ತಮುದ್ರಾಧಾರಣೆ, ಭಜನಾ ಲಹರಿ, ನಂತರ ಶ್ರೀಗಳಿಂದ ಸಂಸ್ಥಾನ ದೇವರ ಪೂಜೆ ಮೊದಲಾದ ಕಾರ್ಯಕ್ರಮಗಳು ನಡೆದವು. ಭಾನುವಾರವಾದ್ದರಿಂದ ಪರಸ್ಥಳದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net