

ತುಮಕೂರು: ಪ್ರಧಾನಿ ಮೋದಿ ಅವರು ಬಡವರ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಅದೇ ಹಾದಿಯಲ್ಲಿ ರಾಜ್ಯ ಸರ್ಕಾರವೂ ಸರ್ವಸ್ಪರ್ಶಿ ಆಡಳಿತ ನೀಡುತ್ತಾ ಜನರ ಕಲ್ಯಾಣಕ್ಕಾಗಿ ತನ್ನನ್ನು ಅರ್ಪಿಸಿಕೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ 600 ಕೋಟಿ ರೂ., ವೆಚ್ಚದ ಯೋಜನೆಗಳ ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಗೆ ಈ ವರ್ಷವೇ ನೀರು ಹರಿಸಲಾಗುವುದು ಎಂದರು.
ಯುವಕರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ನೆರವು, ಬಡ ಹೆಣ್ಣುಮಕ್ಕಳಿಗೆ 1 ಸಾವಿರ ರೂ., ಎಸ್ಸಿ-ಎಸ್ಟಿ ಮಕ್ಕಳಿಗೆ ವಿದ್ಯಾರ್ಥಿವೇತನ, ಹೆಣ್ಣುಮಕ್ಕಳಿಗೆ ಉಚಿತ ಬಸ್‌ಪಾಸ್, ಪದವಿ ಹಂತದವರೆಗೆ ಶಿಕ್ಷಣ ಶುಲ್ಕ ಭರಿಸುವುದೂ ಸೇರಿ ಹಲವು ಯೋಜನೆಗಳನ್ನು ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಉಳ್ಳವರಿಗೆ 2 ಸಾವಿರ ರೂ., ಕೊಡುವುದಲ್ಲ. ಕಾಂಗ್ರೆಸ್‌ನ ಪುಕ್ಕಟೆ ಯೋಜನೆಗಳಿಂದ ರಾಜ್ಯ ದಿವಾಳಿ ಆಗಲಿದೆ ಎಂದು ಗುಡುಗಿದರು.
ಸರ್ಕಾರ ಬದಲಾವಣೆ ತರುವ ವಾಹನವಾಗಿದ್ದು, ಅದರಂತೆ ರೈತರ, ಕಾರ್ಮಿಕರ, ಮಹಿಳೆಯರ ದುಡಿಮೆಯಿಂದ ಪ್ರಗತಿಯ ಬದಲಾವಣೆ ತರಲು ಸಾಧ್ಯ. ಆ ದುಡಿಯುವ ಕೈಗಳಿಗೆ ಶಕ್ತಿ ನೀಡುವ ಮೂಲಕ ದುಡಿಮೆಯೇ ದೊಡ್ಡಪ್ಪ ಅನ್ನುವುದನ್ನು ನಿರೂಪಿಸುವುದು ನಮ್ಮ ಧ್ಯೇಯವಾಗಿದೆ. ಸರ್ಕಾರ ಶ್ರೀಮಂತವಾಗಿರುವುದಲ್ಲ, ನಮ್ಮ ಜನ ಶ್ರೀಮಂತವಾಗಿರಬೇಕು. ದುಡಿಯುವ ವರ್ಗ ಶ್ರೀಮಂತವಾಗಬೇಕು. ಅದರಿಂದ ನಾಡು ಸಮೃದ್ಧಿಯಾಗಲಿದೆ ಎಂದು ಬೊಮ್ಮಾಯಿ ಕೈಗೆ ತಿರುಗೇಟು ಕೊಟ್ಟರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಬಿ.ಸಿ.ನಾಗೇಶ್, ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಮಸಾಲಾ ಜಯರಾಂ, ಡಾ.ಸಿ.ಎಂ.ರಾಜೇಶಗೌಡ, ಚಿದಾನಂದ ಎಂ.ಗೌಡ, ಮೇಯರ್ ಎಂ.ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ , ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೆ ತುಮಕೂರು ವಿವಿಯ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಗರ ಬಿಜೆಪಿಯ ಬಣ ಪ್ರದರ್ಶನವಾಯಿತು. ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಪರ ಬಿಜೆಪಿ ಅಧಿಕೃತ ಬಣ ಒಂದು ಕಡೆಯಾದರೆ, ಮಾಜಿ ಸಚಿವ ಸೊಗಡುಶಿವಣ್ಣ ಬಣ ಮತ್ತೊಂದು ಕಡೆ ಜಯಘೋಷಗಳನ್ನು ಕೂಗಿ ಶಕ್ತಿ ಪ್ರದರ್ಶನ ನಡೆಸಿತು. ಸೊಗಡು ಆಪ್ತರಾದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದಿಂದ ದೂರ ಉಳಿದಿದ್ದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿತು.
ಪವರ್ ಪೊಲಿಟಿಕ್ಸ್ ನಮ್ಮದಲ್ಲ. ಪೀಪಲ್ಸ್ ಪೊಲಿಟಿಕ್ಸ್ ನಮ್ಮದು. ಅಧಿಕಾರವನ್ನು ದುರ್ಲಾಭಕ್ಕಾಗಿ ಬಳಸಿಕೊಂಡವರಲ್ಲ. ಸ್ವಾತಂತ್ರೃ ಬಂದಾಗಿನಿಂದ ಜನರನ್ನು ಮರಳು ಮಾಡಿಕೊಂಡು ಬಂದಿದ್ದಾರೆಯೇ ಹೊರತು ಘೋಷಣೆ ಮಾಡಿದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳಿಸಿಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಜನರ ರಾಜಕಾರಣ ನಮ್ಮದು. | ಬಸವರಾಜ ಬೊಮ್ಮಾಯಿ ಸಿಎಂ