ಬೆಂಗಳೂರು: ‘ದ ಜಡ್ಜ್‌ಮೆಂಟ್’ ಬಳಿಕ ಗುರುರಾಜ್ ಕುಲಕರ್ಣಿ (ನಾಡಗೌಡ) ನಿರ್ದೇಶನದ ಚಿತ್ರ ‘ಡಿಯರ್ ಹಸ್ಬೆಂಡ್’. ಕಳೆದ ಜನವರಿಯಲ್ಲಿ ಈ ಸಿನಿಮಾ ಘೋಷಿಸಲಾಗಿತ್ತು. ಇದೀಗ ಮೊದಲ ಹಂತದ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಹಾಡುಗಳು ಧ್ವನಿ ಮುದ್ರಣವನ್ನೂ ಪೂರ್ಣಗೊಳಿಸಿದೆ. ಜತೆಗೆ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಲಾಗಿದೆ. ಚಿತ್ರದ ಒಂದು ಹಾಡಿಗೆ ಖ್ಯಾತ ಗಾಯಕ ನಕಾಶ್ ಅಜೀಜ್ ಧ್ವನಿಯಾಗಿರುವುದು ವಿಶೇಷ. ಚಿತ್ರದ ‘ಮಾಲಾಶ್ರೀ ಸಿಕ್ಕಳೋ ಮೆಲ್ಲನೆ ನಕ್ಕಳೋ’ ಎಂದು ಆರಂಭವಾಗುವ ಟಪೋರಿ ಶೈಲಿಯ ಹಾಡಿಗೆ ನಕಾಶ್ ಧ್ವನಿಯಾಗಿದ್ದು, ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಇದೇ ಹಾಡಿನ ರೆಕಾರ್ಡಿಂಗ್ ನಡೆಯಿತು. ‘ಈ ಹಾಡು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ. ಹೊಸ ರೀತಿಯಲ್ಲಿ ಮೂಡಿಬಂದಿರುವ ಈ ಹಾಡು ಖಂಡಿತವಾಗಿಯೂ ಪ್ರೇಕ್ಷಕರನ್ನು ಸೆಳೆಯಲಿದೆ. ಮಂಡ್ಯ ಹಿನ್ನೆಲೆಯಲ್ಲಿ ಸಾಗುವ ಈ ಸಾಂಗ್ ನೋಡುಗರನ್ನು ಕುಣಿಸುವಂತೆ ಮಾಡುತ್ತದೆ’ ಎಂದು ಗುರುರಾಜ್ ಕುಲಕರ್ಣಿ ಭರವಸೆ ವ್ಯಕ್ತಪಡಿಸಿದರು. ಇನ್ನು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ, ಪ್ರವೀಣ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮೊದಲ ಹಂತ ಮುಗಿದ ಬೆನ್ನಲ್ಲೇ ಬೆಂಗಳೂರು, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಗೋವಾ ಸೇರಿ ವಿವಿಧೆಡೆ ಮುಂದಿನ ಹಂತಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ. ಇದೇ ವರ್ಷಾಂತ್ಯಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.