

ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜಂಟಿ ಮಧ್ಯಮಗಾತ್ರದ ತುಂಗಭದ್ರಾ ಯೋಜನೆಯಡಿ ಈ ಬಾರಿ ಒಂದೇ ಬೆಳೆ ಎನ್ನುವುದು ನಿಚ್ಚಳವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತಾಪಿ ವರ್ಗ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ಸನ್ನದ್ಧವಾಗಿದೆ.
ಅಣೆಕಟ್ಟೆಯ 32 ಕ್ರಸ್ಟ್ಗೇಟ್ಗಳನ್ನು ಬದಲಾಯಿಸಲು ತುಂಗಭದ್ರಾ ಮಂಡಳಿ ನಿರ್ಧರಿಸಿ, ಟೆಂಡರ್ ಕರೆದಿದೆ. ಗುಜರಾತ್ ಮೂಲದ ಕಂಪನಿಗೆ ಗುತ್ತಿಗೆ ನೀಡಿದ್ದು, ಈಗಾಗಲೇ ಎಂಟು ಕ್ರಸ್ಟ್ಗೇಟ್ಗಳು ಸಿದ್ಧವಾಗಿವೆ.
ಅಚ್ಚುಕಟ್ಟು ಪ್ರದೇಶದ ಮೊದಲನೇ ಬೆಳೆ ರೈತರ ಕೈಗೆ ತಲುಪಿದ ನಂತರ ಕ್ರಸ್ಟ್ಗೇಟ್ಗಳ ಬದಲಾವಣೆ ಶುರುವಾಗಿದ್ದು, 2026ರ ಜೂನ್ ಒಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆ ಕಂಪನಿಗೆ ಮಂಡಳಿ ಗಡುವು ವಿಧಿಸಿದೆ.
ಕಳೆದ ವರ್ಷ ಕ್ರಸ್ಟ್ಗೇಟ್ವೊಂದು ಕೊಚ್ಚಿ ಹೋದ ದುರಂತದ ನಂತರ ಉನ್ನತಮಟ್ಟದ ತಜ್ಞರನ್ನು ಒಳಗೊಂಡ ಅಧ್ಯಯನ ನಡೆಸಿ 32 ಕ್ರಸ್ಟ್ಗೇಟ್ಗಳನ್ನು ಹೊಸದಾಗಿ ಅಳವಡಿಸಲು ಶಿಾರಸು ಮಾಡಿದೆ.
ಕ್ರಸ್ಟ್ಗೇಟ್ಗಳ ಬದಲಾವಣೆಗೆ ಮಂಡಳಿ ಸಭೆಯಲ್ಲಿ ತೀರ್ಮಾನಿಸಿ, ಈ ಬಾರಿ ಎರಡನೇ ಬೆಳೆಗೆ ನೀರು ಕೊಡುವುದು ಸಾಧ್ಯವಿಲ್ಲ ಎಂದಿದೆ. ಕರ್ನಾಟಕದ 10 ಲಕ್ಷ ಎಕರೆ, ಆಂಧ್ರ-ತೆಲಂಗಾಣದ ಆರು ಲಕ್ಷ ಎಕರೆ ಪ್ರದೇಶಕ್ಕೆ ‘ಅನಿವಾರ್ದ ಬೆಳೆ ರಜೆ‘ (ಕ್ರಾಪ್ ಹಾಲಿಡೇ)ಯಾಗಲಿದೆ.
ಕರ್ನಾಟಕದ ಒಟ್ಟು 10 ಲಕ್ಷ ಪೈಕಿ ಎಂಟು ಲಕ್ಷ ಎಕರೆಯಲ್ಲಿ 2ನೇ ಬೆಳೆ ಬೆಳೆಯಲಾಗುತ್ತಿತ್ತು. ಎಕರೆಗೆ 50 ಸಾವಿರ ರೂ.ನಂತೆ ಲೆಕ್ಕ ಹಿಡಿದರೂ ನಾಲ್ಕು ಸಾವಿರ ಕೋಟಿ ರೂ. ಉತ್ಪನ್ನ ಕೈ ತಪ್ಪಲಿದೆ.
ಆಂಧ್ರ, ತೆಲಂಗಾಣದ ಒಟ್ಟು ಉತ್ಪನ್ನದ ಮೌಲ್ಯ ಮೂರು ಸಾವಿರ ಕೋಟಿ ರೂ.ಗಳಾಗಲಿದೆ. ಉತ್ಪನ್ನ ಮೊತ್ತವಷ್ಟೇ ಲಕ್ಷಾಂತರ ಕೃಷಿ ಕೂಲಿಕಾರರ ಕೈಗೆ ಕೆಲಸ ಹೋಗಲಿದೆ. ಉದ್ಯಮ-ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ರಸ್ಟ್ಗೇಟ್ಗಳ ಬದಲಾವಣೆಗಾಗಿ ಒಂದು ಬೆಳೆ ತ್ಯಾಗ, ತಾತ್ಪೂರ್ತಿಕವಾಗಿ ದುಬಾರಿ ಬೆಲೆ ತೆರಲು ಸಿದ್ಧವಾಗಿರುವ ರೈತರಿಗೆ ಶಾಶ್ವತ ಪರಿಹಾರದ್ದೇ ತಳಮಳವಾಗಿದೆ.
ಹೊಸ ಕ್ರಸ್ಟ್ಗೇಟ್ಗಳನ್ನು ಅಳವಪಡಿಸುವ ಜತೆಗೆ ತಜ್ಞರ ಶಿಾರಸಿನಂತೆ ಅಣೆಕಟ್ಟೆಯ ಸುರಕ್ಷತೆಗೂ ಮಂಡಳಿ ಗಮನಿಸಬೇಕು. ಮುಖ್ಯವಾಗಿ ಶೇಕಡ 67ರಷ್ಟು ನೀರಿನ ಪಾಲು ಕರ್ನಾಟಕ ಪಡೆಯಲಿದ್ದು, ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಿದೆ.
ಒಂದು ಬೆಳೆ ಬೆಳೆಯದ ಕಾರಣ ಸುದೀರ್ಘ ಎಂಟು ತಿಂಗಳ ಕಾಲಾವಕಾಶ ಲಭ್ಯವಾಗಲಿದೆ. ಇದನ್ನು ಬಳಸಿಕೊಂಡು ಎಡದಂಡೆ ಮುಖ್ಯ ಕಾಲುವೆ, 18 ಸೇತುಗಾಲುವೆ (ಅಕ್ವಡಕ್ಟ್)ಗಳ, 100 ವಿತರಣಾ ಕಾಲುವೆಗಳ ಜಾಲ ಬಲವರ್ಧನೆ ಕೈಗೆತ್ತಿಕೊಂಡು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಚಿವರು, ಶಾಸಕರು ಹಾಗೂ ರೈತರು ಒತ್ತಡ ಹೇರಿದ್ದಾರೆ.
ತುಂಗಭದ್ರಾ ಮಂಡಳಿಯು ತನ್ನ ವ್ಯಾಪ್ತಿಗೆ ಬರುವ ಬಲದಂಡೆ ಮೇಲ್ಮಟ್ಟ, ಕೆಳಮಟ್ಟದ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ಪೂರಕವಾಗಿ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ನೀರೊದಗಿಸುವ ನಾಲೆಗಳ ಆಧುನೀಕರಣಕ್ಕೆ ಕ್ರಮವಹಿಸಬೇಕು ಎಂಬ ಬೇಡಿಕೆಯಿರಿಸಲಾಗಿದೆ.
ಎಲ್ಲ ಹಂತದ ಕಾಲುವೆಗಳು, ಸೇತುವೆಗಾಲುವೆಗಳ ಶಾಶ್ವತ ಪರಿಹಾರ ಕಾಮಗಾರಿಗೆ ಪ್ರಾಥಮಿಕ ಅಂದಾಜಿನ ಪ್ರಕಾರ ಒಂದು ಸಾವಿರ ಕೋಟಿ ರೂ. ಬೇಕಾಗುತ್ತದೆ. ಈ ಮೊತ್ತ ದೊಡ್ಡದೆನಿಸಿದರೂ 30 ವರ್ಷಗಳ ಕಾಲ ಅಚ್ಚುಕಟ್ಟಿಗೆ ನೀರು ಪೂರೈಕೆ ಖಾತರಿ, ಜನರ ನೆಮ್ಮದಿ ಜೀವನಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.
ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರಾಟ, ಸಂಬಂಧಿತ ಚಟುವಟಿಕೆಗಳು, ಉದ್ಯಮವಹಿವಾಟು ಸುಗಮವಾಗಿ ನಡೆದು, ಸರ್ಕಾರ ಖರ್ಚು ಮಾಡಿದ್ದಕ್ಕಿಂತ 10ಪಟ್ಟು ಹೆಚ್ಚಿನ ಮೊತ್ತ ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ ಎನ್ನುವುದು ಪ್ರದೇಶದ ಜನರ ಪ್ರತಿಪಾದನೆಯಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯನ್ನು 4,100 ಕ್ಯುಸೆಕ್ ನೀರು ಹರಿಯುವಿಕೆ ಸಾಮರ್ಥ್ಯ ವಿನ್ಯಾಸಗೊಳಿಸಿ, ಬಲವರ್ಧನೆ ಮಾಡಲಾಗಿದೆ. ಆದರೆ ಕಾಲುವೆಯ 19ನೇ ಮೈಲ್ನಲ್ಲಿ ಬರುವ ‘ಪಾಪಯ್ಯ ಸುರಂಗ’ ಮಾರ್ಗವು 3,100 ಕ್ಯುಸೆಕ್ ಸಾಮರ್ಥ್ಯವನ್ನು ಹೊಂದಿದೆ.
ಹೆಚ್ಚಿಗೆ ಹರಿದ ನೀರು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಕಾರಣ ಪದೇ ಪದೆ ತಡೆಯೊಡ್ಡಲಾಗುತ್ತದೆ. ಇದರಿಂದ ಕೊನೆಭಾಗದ ಎರಡು ಲಕ್ಷ ಎಕರೆ ಪ್ರದೇಶ ಶಾಪಗ್ರಸ್ತವಾಗಿದೆ. ಆಗಿನ ಕಾಲದ ತಾಂತ್ರಿಕ ನೆರವಿನಡಿ ಮಾನವ ನಿರ್ಮಿತ ಸುರಂಗ ಮಾರ್ಗಯಿದಾಗಿದೆ.
ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಿಕೊಂಡು ಸುರಂಗಕ್ಕೆ ಕಾಯಕಲ್ಪ ನೀಡಿದರೆ 4,100 ಕ್ಯುಸೆಕ್ ನೀರು ಹರಿಸಲು ಶಕ್ತವಾಗಲಿದೆ ಎಂಬ ನಿರೀಕ್ಷೆಯೂ ಚಿಗುರಿದೆ.
ಬರಪೀಡಿತ ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶಕ್ಕೆ ಕುಡಿಯುವ ನೀರು, ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವ ಈ ಅಣೆಕಟ್ಟೆ ಏಳು ದಶಕಗಳ ಬಳಿಕ ದಣಿವಾರಿಸಿಕೊಳ್ಳುತ್ತಿದೆ.
ಬ್ರಿಟಿಷ್ ಅಧಿಕಾರಿ ಅರ್ಥೂರ್ ಕಾಟನ್ ಪರಿಕಲ್ಪನೆ, ಉಭಯ ರಾಜ್ಯಗಳ ಯೋಜನೆ, ಮೊದಲ ಮುಖ್ಯ ಇಂಜಿನಿಯರ್ ತಿರುಮಲೆ ಅಯ್ಯಂಗಾರ್ ಪರಿಶ್ರಮ, ಉಭಯ ರಾಜ್ಯಗಳ ವ್ಯಾಜ್ಯ ಇತ್ಯರ್ಥ, ಬೇಕಾದ ಸಾಮಗ್ರಿ, ಸಲಕರಣೆಗೆ ರಚಿತ ಎರಡು ಉನ್ನತಮಟ್ಟದ ಸಮಿತಿಗಳಿಗೆ ಅಧ್ಯಕ್ಷರಾಗಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಮಾರ್ಗದರ್ಶನವನ್ನು ಯೋಜನೆಯ ಲಾನುಭವಿ ಜಿಲ್ಲೆಗಳ ಜನರು ಮೆಲುಕು ಹಾಕುತ್ತಾರೆ.
ಕ್ರಸ್ಟ್ಗೇಟ್ಗಳ ಬದಲಾವಣೆಯಿಂದ ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ಲಭ್ಯವಾಗುವ ಕಾಲಾವಕಾಶದಲ್ಲಿ ಅಚ್ಚುಕಟ್ಟು ಪ್ರದೇಶದ ಎಲ್ಲ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು. - ಸಿದ್ದರಾಮಯ್ಯ, ಸಿಎಂ. ಹೊಸ ಕ್ರಸ್ಟ್ಗೇಟ್ಗಳ ಅಳವಡಿಕೆ ಜತೆಗೆ ಐಐಎಸ್ಸಿ ತಜ್ಞರನ್ನು ಒಳಗೊಂಡ ಸಮಿತಿ ಶಿಾರಸು ಪ್ರಕಾರ ಅಣೆಕಟ್ಟೆ ಸುರಕ್ಷತೆಗೆ ಕ್ರಮವಹಿಸಬೇಕು. ಈ ವಿಷಯದಲ್ಲಿ ತುಂಗಭದ್ರಾ ಮಂಡಳಿಗಿಂತ ರಾಜ್ಯ ಸರ್ಕಾರದ ಹೊಣೆ ಹೆಚ್ಚಿದೆ. - ಹನುಮನಗೌಡ ಬೆಳಗುರ್ಕಿ, ಮಾಜಿ ಅಧ್ಯಕ್ಷ, ರಾಜ್ಯ ಕೃಷಿ ಬೆಲೆ ಅಯೋಗ.