

ಹೈದರಾಬಾದ್: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕೌತುಕ ಹೆಚ್ಚಿಸಿದ್ದ ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ, ಸೈನ್ಸ್ ಫಿಕ್ಷನ್ ಆಧರಿತ ‘ಕಲ್ಕಿ 2898 ಎಡಿ’ ಸಿನಿಮಾ ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಅಪಾರ ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ರಿಲೀಸ್ಗೂ ಮುನ್ನವೇ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಲ್ ಮಾಡಲಿದೆ ಹಾಗೂ ಈ ಹಿಂದಿನ ದಾಖಲೆಗಳನ್ನು ಮೀರಿ, ಹೊಸ ರೆಕಾರ್ಡ್ ಬರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಪ್ರಭಾಸ್ ಸಿನಿಮಾ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ ಎಂದೇ ಅನೇಕರು ಅಭಿಪ್ರಾಯಿಸುತ್ತಿದ್ದಾರೆ.
ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಪಶುಪತಿ ರಾಮಸ್ವಾಮಿ, ಶಾಶ್ವತ್ ಚಟರ್ಜಿ ಸೇರಿದಂತೆ ಮುಂತಾದವರ ತಾರಾಗಣವಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದ್ರೆ, ಅವರನ್ನೆಲ್ಲಾ ಮೀರಿ ತೆಲುಗು ಚಿತ್ರರಂಗದ ಕೆಲವು ಸ್ಟಾರ್ ನಟರು ಕೂಡ ಚಿತ್ರದ ಭಾಗವಾಗಿದ್ದಾರೆ ಎಂಬ ಸುದ್ದಿ ಸದ್ಯ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
ಚಿತ್ರದಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮ, ನಟ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಹಾಗೂ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಗತಿ ಸಿನಿಪ್ರೇಕ್ಷಕರಲ್ಲಿ ಭಾರೀ ಅಚ್ಚರಿ ಮೂಡಿಸಿದ್ದು, ತಮ್ಮ ನೆಚ್ಚಿನ ನಟರ ಸಮಾಗಮ ಇರುವುದು ಗೊತ್ತೇ ಇರಲಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ,(ಏಜೆನ್ಸೀಸ್).