ವರ್ಗಾವಣೆ ಸುಗ್ಗಿ ಶುರು: ಇಂದಿನಿಂದ ಒಂದೂವರೆ ತಿಂಗಳು ಪ್ರಕ್ರಿಯೆ

Transfer
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ಷಯ ತೃತೀಯಕ್ಕೆ ಮೊದಲೇ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಸರ್ಕಾರಿ ನೌಕರರಿಗೆ ಏಕಕಾಲಕ್ಕೆ ‘ಸುವರ್ಣಾವಕಾಶ’ ಒದಗಿಸಿದ್ದಾರೆ. ಪ್ರಸಕ್ತ ವರ್ಷ (2022-23)ದ ಸಾರ್ವತ್ರಿಕ ವರ್ಗಾವಣೆಗೆ ಅಸ್ತು ಎಂದಿದ್ದಾರೆ. ಇದರಿಂದಾಗಿ ಭಾನುವಾರ (ಮೇ 1) ದಿಂದಲೇ ವರ್ಗಾವಣೆ ಸುಗ್ಗಿ ಆರಂಭವಾಗಲಿದೆ.

ಮುಂದಿನ ವರ್ಷ ಮೇನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ನೀತಿ ಸಂಹಿತೆ ಜಾರಿಯಾಗಲಿದೆ. ಫೆಬ್ರವರಿಯಲ್ಲಿ ಚುನಾವಣಾ ವರ್ಷದ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ ಆಡಳಿತಾತ್ಮಕವಾಗಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಚುನಾವಣಾ ವರ್ಷದ ವರ್ಗಾವಣೆ ಫ್ಲಡ್​ಗೇಟ್ ತೆರೆದಿದ್ದಾರೆ.

ಸಚಿವರಿಗೆ ಸ್ವಾತಂತ್ರ್ಯ: ಸಚಿವ ಸಂಪುಟದ ಸಹೋದ್ಯೋಗಿಗಳು ಖುಷಿಪಡುವ ನಿರ್ಧಾರವನ್ನೇ ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದು, ಬೇಕಾದ ಸ್ಥಳಕ್ಕೆ ಬೇಕಿರುವ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ನೀಡಿದ್ದಾರೆ. ಈ ವರ್ಗಾವಣೆ ಪ್ರಕ್ರಿಯೆ ಮೇ 1ರಂದು ಶುರುವಾಗಲಿದ್ದು, ಜೂನ್ 15ರವರೆಗೆ ಕಾಲಾವಕಾಶ ನಿಗದಿಯಾಗಿದೆ.

ಸುದೀರ್ಘ 45 ದಿನಗಳ ಅವಧಿಯ ವರ್ಗಾವಣೆ ಹಬ್ಬವು ಆಡಳಿತ ಬಿಜೆಪಿ ಮತ್ತು ಆಡಳಿತಯಂತ್ರಾಂಗದಲ್ಲಿ ಹೊಸ ಚೈತನ್ಯ ತುಂಬುವುದು ನಿಶ್ಚಿತ.ಸಿಎಂ ಆದಿಯಾಗಿ ಹಲವು ಸಚಿವರ ಪ್ರವಾಸ, ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಭಾಗಿ ಇನ್ನಿತರ ಕಾರಣಗಳಿಗೆ ಇತ್ತೀಚಿನ ದಿನಗಳಲ್ಲಿ ವಿಧಾನಸೌಧ ಕಳಾಹೀನವಾಗಿತ್ತು.

ಸಚಿವರು ಹಾಗೂ ಶಾಸಕರ ಒಡನಾಟ, ಸಚಿವರ ಕಚೇರಿಗಳಿಗೆ ಕೈತುಂಬ ಕೆಲಸ, ಅರ್ಜಿ ಹಿಡಿದುಕೊಂಡು ಬರುವವರು ಮುಂತಾದ ಬಿರುಸಿನ ಚಟುವಟಿಕೆಗಳಿಂದ ಶಕ್ತಿಸೌಧ ಮತ್ತೆ ಕಳೆಗಟ್ಟುವ ಸಾಧ್ಯತೆಗಳಿವೆ. ಸಾರ್ವತ್ರಿಕ ವರ್ಗಾವಣೆ ಆದೇಶಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ಅಧಿಕಾರಿಗಳು ಮತ್ತು ನೌಕರರ ಸಂತಸ ಹೆಚ್ಚಿಸಿದೆ.

ಶೇ.6ರ ಮಿತಿ: ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾರ್ವತ್ರಿಕ ವರ್ಗಾವಣೆ ಅನ್ವಯಿಸಿದ್ದು, ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡ 6 ಮೀರಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಅವ್ಯಕ್ತ ಅಳುಕು: ಒಂದೂವರೆ ತಿಂಗಳು ಕಾಲ ನಾಲ್ಕು ಶ್ರೇಣಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲವು ವರ್ಗಾವರ್ಗಿಯಲ್ಲಿ ಮುಳುಗಿದರೆ ಆಡಳಿತಯಂತ್ರಾಂಗದ ಗಮನವೆಲ್ಲ ಅತ್ತಲೇ ನೆಡಲಿದೆ. ಇದು, ಬಜೆಟ್​ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ವೇಗ ತಗ್ಗಿಸಲಿದೆ ಎಂಬ ಅವ್ಯಕ್ತ ಅಳುಕು ಆಡಳಿತ ಪಕ್ಷದ ಹಿರಿಯ ನಾಯಕರನ್ನು ಕಾಡಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net