

ನವದೆಹಲಿ: ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್ಗಳು ಮಾನವನ ಜೀವನದ ಭಾಗವಾಗಿವೆ. ಪ್ರತಿನಿತ್ಯ ಸಮಯ ಸಿಕ್ಕಾಗಲೆಲ್ಲಾ ಮೊಬೈಲ್ ಫೋನ್ ಹಿಡಿದುಕೊಂಡು ಜಾಲತಾಣದಲ್ಲಿ ಸಿಗವಂತಹ ಮಾಹಿತಿ ಮನರಂಜನೆಯನ್ನು ಸ್ಕ್ರಾಲ್ ಡೌನ್ ಮಾಡುತ್ತಿರುತ್ತೇವೆ.
ಮೊಬೈಲ್ ಬಳಸುತ್ತಾ ಊಟ ಮಾಡುವಾಗ ಕೆಲವೊಮ್ಮೆ ಮೊಬೈಲ್ ಕೈಜಾರಿ ತಟ್ಟೆಯೊಳಗಿನ ಸಾಂಬರಿಗೂ ಬಿದ್ದಿದ್ದನ್ನು ನೋಡಿರುತ್ತೇವೆ. ಇದೀಗ ಈ ರೀತಿಯ ಕಿರಿಕಿರಿಗಳು ಮುಂದೆ ಎದುರಾಗದಿರಲು ಆಧುನಿಕ ಉಪಾಯವೊಂದು ಕಣ್ಣ ಮುಂದೆ ಬಂದಿದ್ದು, ವೈರಲ್ ಕೂಡ ಆಗಿದೆ.
"ಆಧುನಿಕ ತಟ್ಟೆ" ಎಂಬ ಪರಿಕಲ್ಪನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನ್ನ, ಸಾಂಬರ್, ರೊಟ್ಟಿ, ಮೊಸರು ಮುಂತಾದ ಪದಾರ್ಥಗಳನ್ನು ಇಟ್ಟುಕೊಳ್ಳುವಂತೆಯೇ ಮೊಬೈಲ್ ಇಡಲು ತಟ್ಟೆಯಲ್ಲಿ ಪ್ರತ್ಯೇಕ ಕಂಪಾರ್ಟ್ಮೆಂಟ್ ನೀಡಲಾಗಿದೆ. ಇದರಿಂದ ಯಾವುದೇ ಅಡ್ಡಿಯಿಲ್ಲದೇ ಮೊಬೈಲ್ ಬಳಸುತ್ತಾ ಊಟ ಮಾಡಲು ಆಧುನಿಕ ತಟ್ಟೆ ನೆರವಾಗುತ್ತದೆ.
ವ್ಯಕ್ತಿಯೊಬ್ಬ ಆಧುನಿಕ ತಟ್ಟೆಯಲ್ಲಿ ಮೊಬೈಲ್ ಇಟ್ಟು ಬ್ರೌಸ್ ಮಾಡುತ್ತಾ ಆರಾಮವಾಗಿ ಊಟ ಮಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಧುನಿಕ ತಟ್ಟೆಯಲ್ಲಿ ಮೊಬೈಲ್ಗಾಗಿ ಸ್ಥಳವಿದೆ. ಆರ್ಡರ್ ಮಾಡಿ ಎಂದಿದ್ದಾರೆ. (ಏಜೆನ್ಸೀಸ್)