ಹತ್ರಾಸ್​​ ರೇಪ್​ ಆರೋಪಿಯ ತಂದೆಗೂ, ಬಿಜೆಪಿ ನಾಯಕರಿಗೂ ನಂಟು?- ಫ್ಯಾಕ್ಟ್​ಚೆಕ್​ನಿಂದ ಹೊರಬಿತ್ತು ಫೋಟೋ ಅಸಲಿಯತ್ತು

Fact Check
Published on

ಲಖನೌ: ಉತ್ತರ ಪ್ರದೇಶ ಹತ್ರಾಸ್​ನಲ್ಲಿ ನಡೆದ ಗ್ಯಾಂಗ್​ ರೇಪ್​ ಪ್ರಕರಣ ದೇಶಾದ್ಯಂತ ಕಿಚ್ಚು ಹೊತ್ತಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವುದು ಒಂದೆಡೆಯಾದರೆ..ಇನ್ನೊಂದೆಡೆ ಉತ್ತರ ಪ್ರದೇಶ ಸರ್ಕಾರ, ಪೊಲೀಸರ ನಡವಳಿಕೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ಯಾಂಗ್​ ರೇಪ್​ ಮಾಡಿದ ನಾಲ್ವರು ಆರೋಪಿಗಳಾದ ಸಂದೀಪ್​, ರಾಮು, ಲವಕುಶ್​ ಮತ್ತು ರವಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಈಗಾಗಲೇ ನೀಡಿದ್ದಾರೆ.

ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಕೂಗು ದೇಶಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿವೆ. ಅದು ವ್ಯಕ್ತಿಯೋರ್ವ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಇರುವ ಚಿತ್ರ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೊಂದಿಗೆ ಇರುವ ಆತ ಹತ್ರಾಸ್​ ಅತ್ಯಾಚಾರ ಆರೋಪಿಗಳಲ್ಲೋರ್ವನಾದ ಸಂದೀಪ್​ನ ತಂದೆ ಎಂದು ಪ್ರತಿಪಾದಿಸಲಾಗಿದೆ.

ಫೋಟೋಗಳನ್ನು ಶೇರ್ ಮಾಡಿರುವ ಫೇಸ್​​ಬುಕ್​ ಬಳಕೆದಾರನೋರ್ವ, ಇಲ್ಲಿ ನೋಡಿ...ಹತ್ರಾಸ್​ ಗ್ಯಾಂಗ್​ರೇಪ್​ ಆರೋಪಿ ಸಂದೀಪ್​ ತಂದೆ ಯೋಗಿ ಜೀ..ಮೋದಿ ಜೀ ಅವರೊಂದಿಗೆ ಇದ್ದಾರೆ. ಅಂದ ಮೇಲೆ ನಾಲ್ವರೂ ಆರೋಪಿಗಳು ಸುರಕ್ಷಿತ, ಅವರಿಗೆ ಯಾವುದೇ ಕಠಿಣ ಶಿಕ್ಷೆ ನೀಡದೆ ರಕ್ಷಿಸಲಾಗುತ್ತದೆ ಎಂದಾಯಿತು ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂನ ಫ್ಯಾಕ್ಟ್​ಚೆಕ್​ನಿಂದ ವಾಸ್ತವಾಂಶ ಬಯಲಾಗಿದೆ. ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಇರುವ ಆ ವ್ಯಕ್ತಿ ಸಂದೀಪ್​ ತಂದೆ ಅಲ್ಲ. ಹತ್ರಾಸ್​ ಗ್ಯಾಂಗ್​ ರೇಪ್​ ಆರೋಪಿಗಳಿಗೂ, ಆತನಿಗೂ ಯಾವುದೇ ಸಂಬಂಧವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ವೈರಲ್​ ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ಶ್ಯಾಮ್ ಪ್ರಕಾಶ್​ ದ್ವಿವೇದಿ. ಉತ್ತರ ಪ್ರದೇಶದ ಬಿಜೆಪಿ ನಾಯಕ. ಬಿಜೆಪಿ ಯುವ ಮೋರ್ಚಾದ ಕಾಶಿ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷ ಎನ್ನಲಾಗಿದೆ.

ವೈರಲ್​ ಫೋಟೋಗಳನ್ನು ರಿವರ್ಸ್​ ಇಮೇಜ್​ ಸರ್ಚ್​ಗೆ ಹಾಕಿ ಪರಿಶೀಲನೆ ನಡೆಸಿದಾಗ, ಈ ಫೋಟೋಗಳು ಹಿಂದೆ ಡಾ. ಶ್ಯಾಮ್​ ಪ್ರಕಾಶ್​ ದ್ವಿವೇದಿ ಅವರ ಫೇಸ್​ಬುಕ್​ ಅಕೌಂಟ್​ನಲ್ಲಿಯೇ ಶೇರ್ ಆಗಿದ್ದು ಕಂಡುಬಂದಿದೆ. ಹಾಗೇ ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​​ನಲ್ಲಿ, ಹತ್ರಾಸ್​ ಆರೋಪಿ ಸಂದೀಪ್​ ತಂದೆಯ ಹೆಸರು ನರೇಂದ್ರ ಎಂಬುದು ಗೊತ್ತಾಗಿದೆ. ಇದೀಗ ಸಂದೀಪ್​​ನಿಂದ ಅತ್ಯಾಚಾರಕ್ಕೀಡಾದ ಯುವತಿಯ ಅಜ್ಜನ ಮೇಲೆ ನರೇಂದ್ರ 2001ರಲ್ಲಿ ಹಲ್ಲೆ ಮಾಡಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಪಕ್ಕದಲ್ಲಿರುವ ಇವರು ಹತ್ರಾಸ್​ ಗ್ಯಾಂಗ್​ ರೇಪ್​ ಆರೋಪಿಯ ತಂದೆ ಅಲ್ವೇ ಅಲ್ಲ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net