ಆರ್ಥಿಕತೆಗೆ ಉತ್ತೇಜನ ಸಂಕಷ್ಟದ ಸಮಯದಲ್ಲಿ ಇಂಥ ಕ್ರಮ ಅನಿವಾರ್ಯ

edit 4
Published on

ಕರೊನಾ ವೈರಸ್ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ದೇಶದಲ್ಲಿ ಮೇ 3ರವರೆಗೆ ಲಾಕ್​ಡೌನ್ ಇರುವುದು ಗೊತ್ತಿರುವಂಥದೇ. ಇದರಿಂದಾಗಿ ಸಹಜವಾಗಿಯೇ ಜನಜೀವನದ ಮೇಲೆ ಪರಿಣಾಮವಾಗಿದೆಯಲ್ಲದೆ ಬಹುತೇಕ ಎಲ್ಲ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಭಾರತ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತದ ದೇಶಗಳಲ್ಲಿ ಆರ್ಥಿಕತೆ ಕುಸಿದಿದೆ. ಸದ್ಯಕ್ಕೆ ಚೇತರಿಕೆ ಕಂಡುಬರುವುದು ಕಷ್ಟ. ಹೀಗಾಗಿ, ಸಂಕಷ್ಟದಲ್ಲಿರುವವರಿಗೆ ಶಕ್ಯತಃ ನೆರವಾಗುವುದು ಸರ್ಕಾರಗಳ ಕರ್ತವ್ಯ ಮತ್ತು ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಈ ಹಿಂದೆಯೇ ಆರ್ಥಿಕತೆ ಪುನಶ್ಚೇತನಕ್ಕೆ ಅನುವಾಗುವ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಪ್ರಕಟಿಸಿತ್ತು ಮತ್ತು ಪ್ಯಾಕೇಜ್ ಘೋಷಿಸಿತ್ತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕೂಡ ಕೆಲ ಕ್ರಮಗಳನ್ನು ಪ್ರಕಟಿಸಿದೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ)

ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ವಾಗಿ 50 ಸಾವಿರ ಕೋಟಿ ರೂ.ಗಳ ನೆರವನ್ನು ಆರ್​ಬಿಐ ಘೋಷಿಸಿದೆ. ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಹೆಚ್ಚಿಸುವ ಇನ್ನೊಂದು ಕ್ರಮವಾಗಿ ರಿವರ್ಸ್ ರೆಪೊ ದರವನ್ನು (ಬ್ಯಾಂಕುಗಳು ಆರ್​ಬಿಐನಲ್ಲಿ ಇಡುವ ಠೇವಣಿಗೆ ನೀಡುವ ಬಡ್ಡಿ) 25 ಮೂಲಾಂಶದಷ್ಟು ಕಡಿಮೆ ಮಾಡಿದ್ದು, ಶೇ.4ರಿಂದ ಶೇ.3.75ಕ್ಕೆ ತಗ್ಗಿಸಿದೆ. ಆರ್​ಬಿಐ ಬಳಿ ರಿವರ್ಸ್ ರೆಪೊ ವಿಭಾಗದಲ್ಲಿ ಸುಮಾರು 6.9 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಹಣವಿದ್ದು, ಈ ಕ್ರಮದಿಂದಾಗಿ ಬ್ಯಾಂಕುಗಳು ಇ ಹಣವನ್ನು ಸಾಲ ನೀಡುವುದಕ್ಕಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕರೊನಾ ವಿರುದ್ಧದ ಹೋರಾಟಕ್ಕಾಗಿ ರಾಜ್ಯಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಬಂದಿದ್ದು, ಹೆಚ್ಚಿನ ಹಣದ ಅಗತ್ಯವಿದೆ. ಹೀಗಾಗಿ, ರಾಜ್ಯಗಳು ಅಲ್ಪಕಾಲೀನ ನಿಧಿಯಿಂದ ಪಡೆಯಬಹುದಾದ ಹಣದ ಮಿತಿಯನ್ನು ಶೇ.60ಕ್ಕೆ ಆರ್​ಬಿಐ ಹೆಚ್ಚಿಸಿದೆ. ಇದರಿಂದ ರಾಜ್ಯಗಳಿಗೆ ಹಣ ಹೊಂದಾಣಿಕೆಗೆ ಅನುವಾಗುತ್ತದೆ. ಮೊದಲೇ ಎಲ್ಲ ರಾಜ್ಯಗಳು ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿದ್ದು, ಇಂಥ ಹೆಜ್ಜೆಗಳಿಂದ ಸ್ವಲ್ಪವಾದರೂ ಪ್ರಯೋಜನವಾಗುತ್ತದೆ. ಏಕೆಂದರೆ, ಕರೊನಾ ನಿಯಂತ್ರಣಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಇದಲ್ಲದೆ, ನಬಾರ್ಡ್ ಸೇರಿ ಮೂರು ಸಂಸ್ಥೆಗಳಿಗೆ ಒಂದು ಲಕ್ಷ ಕೋಟಿ ರೂ. ನೆರವನ್ನು ಆರ್​ಬಿಐ ಘೋಷಿಸಿದೆ. ಸದ್ಯದ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ, ವಿಶ್ವ ಬ್ಯಾಂಕ್ ಹಾಗೂ ಕೆಲ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಭಾರತದ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ದರ ಕಡಿಮೆಯಾಗಬಹುದೆಂದು ಈಗಾಗಲೇ ಅಂದಾಜಿಸಿವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಮತ್ತು ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸ ಕುದುರಿಸುವ ಕೆಲಸ ಆಗಬೇಕಾಗುತ್ತದೆ. ಇಲ್ಲಿ ಇನ್ನೊಂದು ಅಂಶವೂ ಮುಖ್ಯ. ಅದೆಂದರೆ, ಸರ್ಕಾರ ಮತ್ತು ಆರ್​ಬಿಐ ಇಂಗಿತ ಹಾಗೂ ಉದ್ದೇಶಕ್ಕೆ ಬ್ಯಾಂಕುಗಳು ಸಹ ಸೂಕ್ತರೀತಿಯಲ್ಲಿ ಸ್ಪಂದಿಸಬೇಕಾಗುತ್ತದೆ. ಈ ಹಿಂದೆ, ಆರ್​ಬಿಐ ರೆಪೊ ದರವನ್ನು ಕಡಿಮೆ ಮಾಡಿದಾಗ, ಕೆಲ ಬ್ಯಾಂಕುಗಳು ಅದರ ಪ್ರಯೋಜನವನ್ನು ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ವರ್ಗಾಯಿಸಿರಲಿಲ್ಲ ಎಂಬ ಆಕ್ಷೇಪ-ಅಸಮಾಧಾನಗಳು ವ್ಯಕ್ತವಾಗಿದ್ದವು. ಈಗಂತೂ ದೇಶ ಮತ್ತು ಇಡೀ ವಿಶ್ವದಲ್ಲಿ ಕರೊನಾ ವಿರುದ್ಧ ಅಕ್ಷರಶಃ ಹೋರಾಟವನ್ನೇ ನಡೆಸಲಾಗುತ್ತಿದೆ. ಈ ಹೋರಾಟದಲ್ಲಿ ಎಲ್ಲರೂ ಅವರವರ ನೆಲೆಯಲ್ಲಿ ಕೈಜೋಡಿಸಬೇಕಾದುದು ಕಾಲದ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net