ಇದ್ದರೆ ಹೀಗಿರಬೇಕು ಅಪ್ಪ-ಮಗನ ಸಂಬಂಧ!

7-686c0e8e0369e
Published on
ಒಂದು ಮನೆಯಲ್ಲಿ ಇರುವ ಒಬ್ಬನೇ ಮಗನನ್ನು ಅವನ ತಾಯಿ ತಂದೆ ಮಮತೆಯಿಂದ ಸಾಕಿ ಸಲಹಿ, ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದರು. ಆತನಲ್ಲಿ ಉತ್ತಮ ಸಂಸ್ಕಾರವನ್ನೂ ತುಂಬಿದರು. ಮಗನೂ ಅಷ್ಟೆ. ಕಷ್ಟಪಟ್ಟು ಓದಿ ಹೆತ್ತವರಿಗೂ, ಗುರುಹಿರಿಯರಿಗೂ ವಿಧೇಯನಾಗಿ ನಡೆದುಕೊಂಡು ವಿದ್ಯಾಭ್ಯಾಸವನ್ನು ಮುಗಿಸಿದ. ಅಂತೆಯೇ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಕಾರಣ, ಶೀಘ್ರವಾಗಿ ಒಂದು ಕಂಪೆನಿಯಲ್ಲಿ ನೌಕರಿಯನ್ನು ಗಿಟ್ಟಿಸಿಕೊಂಡ. ತಿಂಗಳು ಮುಗಿಯುತ್ತಿದ್ದಂತೆ, ಮೊದಲ ಸಂಬಳ ಅವನ ಕೈಸೇರಿತು.

ಅದನ್ನು ಆತ ತನ್ನ ಅಮ್ಮನ ಕೈಗಿತ್ತು ಆಕೆಯ ಪಾದಮುಟ್ಟಿ ನಮಸ್ಕರಿಸಿದ. ಮೊದಲಿಗೆ ಆ ತಾಯಿ ಖುಷಿಪಟ್ಟರೂ, ಸ್ವಲ್ಪ ಹೊತ್ತಿನಲ್ಲಿ ಮಗನಿಗೆ ಹೇಳಿದಳು, ‘ಮಗೂ, ಮೊದಲು ಈ ಹಣವನ್ನು ನಿನ್ನ ಅಪ್ಪನ ಕೈಗೆ ಕೊಡು. ಇಷ್ಟಕ್ಕೂ ನಿನ್ನನ್ನು ಓದಿಸಿ, ವಿದ್ಯಾವಂತನನ್ನಾಗಿ ಮಾಡಿ ನೌಕರಿ ಪಡೆದು ಹಣ ಸಂಪಾದನೆ ಮಾಡುವಂತೆ ತಯಾರು ಮಾಡಿದ್ದು ಅವರಲ್ಲವೇ! ನಿನ್ನ ಈ ದುಡಿಮೆಯ ಹಿಂದೆ ಅವರ ಬೆವರಿನ ಹನಿಗಳಿವೆಯಲ್ಲ! ಆದ್ದರಿಂದ ಈ ಹಣ ಅವರಿಗೇ ಸಲ್ಲಬೇಕು’. ಆದರೆ ಅಮ್ಮ ಎಷ್ಟು ಹೇಳಿದರೂ, ಮಗ ಹೀಗೆ ಮಾಡಲು ಒಪ್ಪಲಿಲ್ಲ. ಕೇಳಿಯೂ ಕೇಳದಂತೆಯೇ ಹೊರಟ.

ಅಷ್ಟರಲ್ಲಿ ಆ ತಾಯಿ, ಮಗ ನೀಡಿದ ಹಣವನ್ನೆಲ್ಲಾ ಮತ್ತೆ ಆತನ ಕೈಗೆ ಕೊಟ್ಟು ನಾನಿದನ್ನು ಸ್ವೀಕರಿಸಲಾರೆ. ಇದು ನಿನ್ನ ಅಪ್ಪನಿಗೇ ಸೇರಬೇಕು. ಹೋಗಿ ಕೊಟ್ಟು ಬಾ ಎಂದು ಒತ್ತಾಯಿಸಿದಳು. ಆಗ ಮಗ, ‘ಇಲ್ಲಮ್ಮ, ನಾನು ಅವರಿಗೆ ಕೊಡುವುದಿಲ್ಲ’ ಎಂದು ಖಡಾ ಖಂಡಿತವಾಗಿ ಹೇಳಲು, ಸಿಟ್ಟುಗೊಂಡ ತಾಯಿಗೆ, ಒಂದು ವೇಳೆ ನಾನಿಲ್ಲದೇ ಹೋದರೆ, ಈ ಮಗ ತನ್ನ ತಂದೆಯನ್ನು ಹೇಗೆ ನೋಡಿಕೊಂಡಾನು, ಹೀಗೆಯೇ ಕೈ ಬಿಟ್ಟಾನೆಯೇ ಎಂಬ ಯೋಚನೆ ಬಂದು, ಮಗನ ಕಪಾಳಕ್ಕೆ ಒಂದು ಬಿಗಿದು ಹೇಳಿದಳು: ‘ಏನಪ್ಪಾ, ಮೊದಲ ಸಂಬಳ ತೆಗೆದುಕೊಳ್ಳುವಷ್ಟರಲ್ಲೇ, ನೀನು ನಿನಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ನಿನ್ನಪ್ಪನನ್ನೇ ಮರೆತು ಬಿಡುವಷ್ಟು ದೊಡ್ಡ ಮನುಷ್ಯನಾಗಿ ಬಿಟ್ಟಿದ್ದೀಯ? ನನಗೂ ನಿನ್ನ ಹಣ ಬೇಡ’ ಎಂದು ಹೇಳುತ್ತಾ ಮತ್ತೆ ಆ ನೋಟಿನ ಕಂತೆಯನ್ನು ಅವನ ಮುಖಕ್ಕೆ ಎಸೆದು ಹೊರಟು ನಿಂತಳು. ಅಷ್ಟರಲ್ಲಿ ಮಗ ಏಟು ತಿಂದ ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ, ಕಣ್ಣೀರ ಹನಿಯೊಂದಿಗೆ ಅಮ್ಮನ ಕೈ ಹಿಡಿದು ಹೇಳಿದ: ‘ಇಲ್ಲಮ್ಮ ನಾನು ಅಪ್ಪನ ಮೇಲಿನ ಅಗೌರವದಿಂದ ಇಲ್ಲವೇ ಯಾವುದೇ ದುರಂಹಕಾರದಿಂದ ಹೀಗೆ ಮಾಡುತ್ತಿಲ್ಲ.

ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳಿದ್ದರೂ, ಅಪ್ಪ ಎಂದೂ ಸ್ವಾಭಿಮಾನೀ ಜೀವನವನ್ನು ನಡೆಸಿದವರು. ಕೈ ಎತ್ತಿ ಕೊಟ್ಟವರೇ ಹೊರತು. ಯಾರ ಮುಂದೆಯೂ ಕೈಚಾಚಿದವರಲ್ಲ. ಈಗ ನಾನು ಈ ಹಣವನ್ನು ಅವರಿಗೆ ನೀಡಲು ಹೋದರೆ, ನನ್ನ ಕೈಗಳು ಮೇಲಿರುತ್ತವೆ. ಅವರ ಕೈಗಳು ಕೆಳಗಿರುತ್ತದೆ. ಹೀಗಾಗಬಾರದು. ಜೀವನದಾದ್ಯಂತ ಅವರು ಆರ್ಥಿಕವಾಗಿ ಮಕ್ಕಳ ಮೇಲೆ ಅವಲಂಬಿತವಾಗದ, ಉನ್ನತ ಗೌರವಾನ್ವಿತ ವ್ಯಕ್ತಿಯಾಗಿರಬೇಕು ಎಂಬುದೇ ನನ್ನ ಆಶಯ. ಅದನ್ನು ಹಣದ ಮೂಲಕ ತೀರಿಸುವ ಸಣ್ಣ ವ್ಯಕ್ತಿಯಾಗಲು ನನಗಿಷ್ಟವಿಲ್ಲ. ಅಪ್ಪ-ಮಕ್ಕಳ ಸಂಬಂಧ ವ್ಯಾಪಾರವಲ್ಲ! ಬರಿಯ ಕೊರಳ ಸಂಬಂಧವಲ್ಲ, ಯಾರೂ ಕಡಿದು ಹಾಕದ ಜನುಮ ಜನುಮಾಂತರದ ಕರುಳ ಸಂಬಂಧ. ಎಂದೆಂದೂ ಅವರು ಎತ್ತರದ ವ್ಯಕ್ತಿಯಾಗಿಯೇ ಇರಬೇಕು. ನಾನು ಅವರಿಗೆ ಚಿರಋಣಿಯಾಗಿರಬೇಕು. ನಾನು ಅವರ ಪಾದದಡಿ, ಅವರ ಅನುಗ್ರಹ-ಆಶೀರ್ವಾದಗಳೊಂದಿಗೆ ಬೆಳೆಯಬೇಕು ಬೆಳೆದು ಬಾಳಬೇಕು. ಇದೇ ನನ್ನ ಆಶಯ. ಆದುದರಿಂದ ಈ ಹಣವನ್ನು ಅವರ ಕೈಗೆ ನೀಡಲಾರೆ. ಬದಲಾಗಿ, ನಿನ್ನ ಅಪೇಕ್ಷೆಯಂತೆ ಅವರ ಪಾದ ಕಮಲಗಳಿಗೆ ಸಮರ್ಪಿಸಿ, ಅವರ ಆಶೀರ್ವಾದವನ್ನು ಬೇಡಿಕೊಳ್ಳುವೆ’

ಇದನ್ನು ಕೇಳಿದ ಅಮ್ಮನ ಕಣ್ಣುಗಳು ಒದ್ದೆಯಾದವು. ಮಾತ್ರವೇ ಅಲ್ಲ, ತಾಯಿ ಮತ್ತು ಮಗನ ಸಂಭಾಷಣೆಯನ್ನು ಕೋಣೆಯೊಳಗೆ ಕುಳಿತು ಆಲಿಸುತ್ತಿದ್ದ ಆ ತಂದೆಯೂ ಹೊರಗೆ ಬಂದು ತನ್ನ ಮಗನನ್ನು ಬಿಗಿದಪ್ಪಿ ಆನಂದ ಬಾಷ್ಪಗಳೊಂದಿಗೆ ಹೇಳಿದ ‘ಇದ್ದರೆ ನಿನ್ನಂತಹ ಮಗನಿರಬೇಕಪ್ಪ’.

ತಾತ್ಪರ್ಯ ಇಷ್ಟೆ! ಬಾಲ್ಯದಿಂದ ಹಿಡಿದು, ದೊಡ್ಡವರಾಗಿ ಜೀವನದಲ್ಲಿ ನೆಲೆಯೂರುವ ತನಕ, ಹೆತ್ತವರು ಮಾಡಿದ ತ್ಯಾಗ ಸಹಾಯ ಗಳನ್ನು ಮಕ್ಕಳಾದವರು ಎಂದೆಂದಿಗೂ ಮರೆಯಬಾರದು. ನಾವೇರದ ಎತ್ತರಕೆ ನೀ ಏರಬೇಕು ಮಗುವೇ ಎಂದು ತುಂಬು ಹೃದಯದಿಂದ ಆಶಿಸಿದವರಲ್ಲವೇ ಈ ಜೀವಗಳು! ಭೂಮಿಯ ಮೇಲೆ ಎಲ್ಲಾ ಕಾಲದಲ್ಲಿ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ದೇವರು, ಅಪ್ಪ-ಅಮ್ಮ ನನ್ನು ಸೃಷ್ಟಿ ಮಾಡಿದನಂತೆ! ಅಂತೆಯೇ ಯಾವುದೇ ಪ್ರಚಾರ-ಪ್ರತಿ ಫಲಾಪೇಕ್ಷೆ ಇಲ್ಲದೆ, ಮಕ್ಕಳನ್ನು ಸಾಕಿ ಸಲಹುವ ಹೆತ್ತವರೂ, ತಮ್ಮ ಜೀವನ ಪರ್ಯಂತ, ಆರ್ಥಿಕವಾಗಿಯೂ, ಆರೋಗ್ಯದ ರಕ್ಷಣೆಯ ದೃಷ್ಟಿಯಿಂದಲೂ ಮಕ್ಕಳಿಗೆ ಹೊರೆಯಾಗದೆ ಸ್ವಾವಲಂಬೀ ಜೀವನ ವನ್ನು ನಡೆಸುವಂತಾದರೆ, ಅದಕ್ಕಿಂತ ದೊಡ್ಡ ಸಂತೃಪ್ತಿ-ಸೌಭಾಗ್ಯ ಬೇರೇನಿದೆ? ಇಂತಹ ಮಕ್ಕಳು ಮತ್ತು ಹೆತ್ತವರು ನಾವಾಗೋಣ.

(ಪ್ರತಿಕ್ರಿಯಿಸಿ: drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net