

ಮಾಸ್ಕೋ: ಯಾವುದೇ ನೈಸರ್ಗಿಕ ವಿಕೋಪ ಅಥವಾ ಅನಿರೀಕ್ಷಿತ ಅಪಘಾತಗಳಿಂದ ಜೀವ ಹಾನಿ ಅಥವಾ ಆಸ್ತಿ ನಷ್ಟ ಆದಂತಹ ಸಂದರ್ಭದಲ್ಲಿ, ಸರ್ಕಾರವು ಸಂತ್ರಸ್ತರಿಗೆ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇದಲ್ಲದೇ, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಪರಿಹಾರ ನಿಧಿಗೆ ದೇಣಿಗೆ ನೀಡುತ್ತಾರೆ. ಪ್ರಪಂಚದಲ್ಲಿ ಎಲ್ಲೆಡೆ ಇಂತಹ ಸನ್ನಿವೇಶಗಳು ನಡೆಯುತ್ತಿರುತ್ತವೆ.
ರಷ್ಯಾ-ಯೂಕ್ರೇನ್ ಮತ್ತು ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಯುದ್ಧದ ಪರಿಣಾಮದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ಮಹಿಳೆಯೊಬ್ಬಳು ಸಂತ್ರಸ್ತರಿಗೆ ಹಣ ಸಹಾಯ ಮಾಡಿದ್ದೇ, ಇದೀಗ ಆಕೆಗೆ ಶಾಪವಾಗಿ ಪರಿಣಮಿಸಿದೆ.
ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ನಿರಂತರವಾಗಿ ಮುಂದುವರಿದಿದೆ. ಯೂಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಮುಂದುವರೆಸಿರುವ ರಷ್ಯಾ, ಶತ್ರು ದೇಶಕ್ಕೆ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗೆ, ದತ್ತಿ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ರಷ್ಯಾದ ಮೂಲಕ ಅಮೆರಿಕನ್ ಮಹಿಳೆಗೆ ಕಠಿಣ ಶಿಕ್ಷೆಯನ್ನು ನೀಡಲಾಗಿದೆ.
ಸೆನಿಯಾ ಖವಾನಾ ಶಿಕ್ಷೆಗೆ ಗುರಿಯಾದವಳು. ಈಕೆ ರಷ್ಯಾದ ನರ್ತಕಿ. ವಯಸ್ಸು 33 ವರ್ಷ. ಇತ್ತೀಚೆಗಷ್ಟೇ ಈಕೆ ಅಮೆರಿಕದ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರಸ್ತುತ ತನ್ನ ಪತಿಯೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ತನ್ನ ಕುಟುಂಬವನ್ನು ಭೇಟಿಯಾಗಲು ಸೆನಿಯಾ ಖವಾನಾ ರಷ್ಯಾಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಆಕೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ರಷ್ಯಾದ ಅಧಿಕಾರಿಗಳು ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಲವಾರು ಸುತ್ತಿನ ತನಿಖೆಯ ನಂತರ, ನ್ಯಾಯಾಲಯವು ಆಕೆಗೆ 12 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅಷ್ಟಕ್ಕೂ ಅವಳು ಮಾಡಿದ ತಪ್ಪೇನು ಗೊತ್ತಾ? ಕೇವಲ 51 (ರೂ.4200) ಡಾಲರ್ ದೇಣಿಗೆ ನೀಡಿದ್ದೇ ಆಕೆ ಮಾಡಿದ್ದ ತಪ್ಪು. ಸೆನಿಯಾ ಖಾವಾನಾ ಅವರು ಯೂಕ್ರೇನ್ ಪರವಾಗಿ ದತ್ತಿ ಸಂಸ್ಥೆಗೆ 51 ಡಾಲರ್ ದೇಣಿಗೆ ನೀಡಿರುವುದನ್ನು ರಷ್ಯಾ ಸರ್ಕಾರ ತಪ್ಪೆಂದು ಪರಿಗಣಿಸಿದೆ. ಯೂಕ್ರೇನಿಯನ್ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕೆಲಸ ಮಾಡುವ ಅಮೆರಿಕನ್ ಚಾರಿಟಿಗಾಗಿ ಸೆನಿಯಾ ದೇಣಿಗೆ ನೀಡಿದ್ದಾರೆ ಎಂದು ಸರ್ಕಾರ ಹೇಳಿದೆ. ಅಲ್ಲದೆ, ಆಕೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದ್ದು, ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ್ದರಿಂದ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ದೇಣಿಗೆಯನ್ನು ರಷ್ಯಾದ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಖವಾನಾ ಹೇಳಿದ್ದಾರೆ. ಮತ್ತೊಂದೆಡೆ, ಆಧಾರರಹಿತ ಆರೋಪದ ಮೇಲೆ ತನ್ನ ನಾಗರಿಕರನ್ನು ಬಂಧಿಸಲಾಗುತ್ತಿದೆ ಎಂದು ಅಮೆರಿಕ ಟೀಕಿಸಿದೆ. ನ್ಯಾಯಾಲಯದ ತೀರ್ಪನ್ನು ಓದುವಾಗ, ಸೆನಿಯಾ ಖವಾನಾ, ಬಿಳಿ ಟಾಪ್ ಮತ್ತು ಜೀನ್ಸ್ ಧರಿಸಿ, ವಿನಮ್ರವಾಗಿ ಕುಳಿತು ವೀಕ್ಷಿಸುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)