

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಈ ಸಲ ದ್ರೌಪದಿಯ ಆಗಮನವಾಗಲಿದೆ. ಅರ್ಥಾತ್, ಈ ಬಾರಿಯ ದಸರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ. ಈ ಕುರಿತು ಖುದ್ದು ಸಿಎಂ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದ್ದಾರೆ. ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಸಭೆ ನಡೆದಿತ್ತು. ಸಭೆ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿತ್ತು. ನಮ್ಮ ಪತ್ರಕ್ಕೆ ಸಮ್ಮತಿಸಿ ಅವರು ಒಪ್ಪಿಗೆ ತಿಳಿಸಿದ್ದು, ಇಂದು ಅವರ ಕಡೆಯಿಂದ ಪತ್ರ ಬಂದಿದೆ ಎಂದು ಸಿಎಂ ತಿಳಿಸಿದ್ದಾರೆ.
ಹೀಗಾಗಿ ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆಗೆ ರಾಷ್ಟ್ರದ ಪ್ರಥಮ ಪ್ರಜೆಯೇ ಉದ್ಘಾಟಕರಾಗಿ ಆಗಮಿಸಲಿರುವುದು ಖಚಿತವಾಗಿದೆ.