ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

ವಿಜಯವಾಣಿ - 2025-01-21T165238.106
Published on

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಮಾತ್ರ ಇಂದಿಗೂ ಸೌದೆ ಒಲೆಯನ್ನು ಬಳಸಿ, ಅಡುಗೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಉಳಿದೆಲ್ಲಾ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಎಲ್​ಪಿಜಿ ಬಳಸುತ್ತಿದ್ದಾರೆ. ಕೆಂಪು ಬಣ್ಣದಲ್ಲಿ ಕಾಣಿಸುವ 14.5 ಕೆಜಿ ತೂಕದ ಸಿಲಿಂಡರ್​ ಉಪಯೋಗ ಇಂದಿಗೂ ಹಲವರಲ್ಲಿ ಆತಂಕ ಮೂಡಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಗ್ಯಾಸ್​ ಅತ್ಯವಶ್ಯಕ

ದಿನನಿತ್ಯ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್​ ಸಿಲಿಂಡರ್​ನ ರೆಗ್ಯೂಲೇಟರ್​ ಆನ್​ ಮಾಡಿಕೊಳ್ಳುವ ನಮ್ಮ ಜನ, ಬಳಕೆಯಾದ ನಂತರ ಅದನ್ನು ಸ್ವಿಚ್ ಆಫ್​ ಮಾಡುತ್ತಾರೆ. ಬಹುತೇಕರಿಗೆ ಇಂದಿಗೂ ಇದೊಂದು ಭಯವಾದ ಕೆಲಸ. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್​ ಅತ್ಯವಶ್ಯಕ. ಹೀಗಿರುವಾಗ ಭಯದಿಂದ ಗ್ಯಾಸ್ ಉಪಯೋಗಿಸದೆ ಇರಲು ಸಾಧ್ಯವಿಲ್ಲ. ಸಿಲಿಂಡರ್​ ಆನ್ ಮಾಡಿ, ಆಫ್​ ಮಾಡುವುದು ತೀರ ಕಷ್ಟಕರ. ಕಾರಣ, ಸಿಲಿಂಡರ್ ಲೀಕೇಜ್​ ಆಗುವ ಸಮಸ್ಯೆ. ಹಲವು ಬಾರಿ ಸಣ್ಣ ಗಾಳಿ ಹೋದ ಶಬ್ದದ ಮೂಲಕ ಲೀಕೇಜ್ ಅನ್ನು ಎಚ್ಚರಿಸುವ ಸಿಲಿಂಡರ್​, ಕೆಲವೊಮ್ಮೆ ಯಾವ ಶಬ್ದವಿಲ್ಲದೆ, ನಮ್ಮ ಗಮನಕ್ಕೆ ಬಾರದೆ ಲೀಕ್ ಆಗುವುದು ಸ್ಫೋಟದ ಭೀತಿಯನ್ನು ಹೆಚ್ಚಿಸುತ್ತದೆ.

ಭಾರೀ ಅನಾಹುತ

ಇತ್ತೀಚಿನ ದಿನಗಳಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ ಪ್ರಕರಣಗಳನ್ನು ತೀರ ಹೆಚ್ಚಾಗಿವೆ. ಅನಿಲ ಸಿಲಿಂಡರ್​ ಸ್ಫೋಟದಿಂದ ಮನೆಯ ಗೋಡೆಗಳು ಛಿದ್ರವಾಗಿ, ಕುಟುಂಬದ ಸದಸ್ಯರು ದುರಂತ ಅಂತ್ಯ ಕಂಡ ಪ್ರಕರಣಗಳನ್ನು ಸುದ್ದಿ ಪತ್ರಿಕೆ, ವಾಹಿನಿಗಳಲ್ಲಿ ಆಗಾಗ್ಗೆ ಕಾಣ ಸಿಗುತ್ತವೆ. ಈ ಭಯ ಇಂದಿಗೂ ಅನೇಕರಲ್ಲಿದೆ. ಎಲ್​ಪಿಜಿ ಗ್ಯಾಸ್​ ಸೋರಿಕೆಯಾದರೆ ಹೇಗೆ? ಏನು ಮಾಡೋದು ಎಂಬ ಆತಂಕದಲ್ಲೇ ಬಳಕೆ ಮಾಡುತ್ತಾರೆ. ಆದರೆ, ಅನಿಲ ಸೋರುತ್ತಿದೆ ಎಂಬುದು ಅದರಿಂದ ಹೊರಬರುವ ದುರ್ವಾಸನೆಯೇ ಸಾಕ್ಷಿ. ರೆಗ್ಯೂಲೇಟರ್​ನಿಂದ ಈ ಕೆಟ್ಟ ವಾಸನೆ ಬರುತ್ತಿದೆ ಎಂದರೆ ಅದು ಖಂಡಿತ ಗ್ಯಾಸ್​ ಲೀಕೇಜ್​ನ ಸೂಚನೆಯೇ. ಇದನ್ನು ಪತ್ತೆಹಚ್ಚುವುದರಿಂದ ಭಾರೀ ಅನಾಹುತವನ್ನು ತಪ್ಪಿಸಬಹುದು.

ಕೊಳೆತ ವಾಸನೆ

ಕೊಳೆತ ಎಲೆಕೋಸು ಅಥವಾ ಟೈರ್​ ಸುಟ್ಟ ವಾಸನೆ ಬೀರುವ ಅನಿಲ ಸೋರಿಕೆ, ಗ್ಯಾಸ್​ ಬಳಕೆದಾರರಿಗೆ ಸೋರಿಕೆಯ ಮುನ್ನೆಚ್ಚರಿಕೆಯನ್ನು ನೀಡುತ್ತದೆ. ಅಸಲಿಗೆ ಅನಿಲಕ್ಕೆ ಯಾವುದೇ ವಾಸನೆ ಇಲ್ಲ. ಇದು ವಾಸನೆ ರಹಿತ​. ಜನರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಹಿನ್ನೆಲೆ ಗ್ಯಾಸ್​ ಸ್ಫೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಸೋರಿಕೆಯ ಬಗ್ಗೆ ಎಚ್ಚರಿಕೆ ನೀಡುವ ಸಲುವಾಗಿ ಈಥೈಲ್ ಮರ್​ಕ್ಯಾಪ್ಟನ್ ಎಂಬ ಕೆಮಿಕಲ್ ಏಜೆಂಟ್​ ಅನ್ನು ಅನಿಲದ ಜತೆ ಬೆರಸಲಾಗುತ್ತದೆ. ಇದು ಗ್ಯಾಸ್​ ಸೋರಿಕೆಯನ್ನು ತಕ್ಷಣವೇ ದುರ್ವಾಸನೆ ಮೂಲಕ ಬಳಕೆದಾರರಿಗೆ ತಿಳಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net