

Mark Zuckerberg : ಉದ್ಯೋಗಕ್ಕಾಗಿ ಅನೇಕ ಮಂದಿ ನಿತ್ಯವು ಅಲೆದಾಡುವುದನ್ನು ನೀವು ನೋಡಿರುತ್ತೀರಿ. ಒಂದೇ ಒಂದು ಉದ್ಯೋಗ ಸಿಗಲಿ ಎಂದು ದೇವರ ಬಳಿ ತುಂಬಾ ಬೇಡಿಕೊಳ್ಳುತ್ತಾರೆ. ಕೆಲವರು ಸರ್ಕಾರಿ ಕೆಲಸವೇ ಸಿಗಲೆಂದು ಬೇಡಿಕೊಂಡರೆ ಇನ್ನು ಕೆಲವರು ನೆಚ್ಚಿನ ಕಂಪನಿಯಲ್ಲಿ ಯಾವುದಾದರೂ ಒಂದು ಕೆಲಸ ಸಿಗಲೆಂದು ಶ್ರಮಿಸುತ್ತಾರೆ. ಅದರಲ್ಲೂ ಗೂಗಲ್, ಅಮೆಜಾನ್ ಹಾಗೂ ಆ್ಯಪಲ್ ಸೇರಿದಂತೆ ಜಾಗತಿಕ ಕಂಪನಿಗಳಲ್ಲಿ ಕೆಲಸ ಸಿಕ್ಕರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಈ ಕೆಂಪನಿಗಳಲ್ಲಿ ಕೆಲಸ ಸಿಕ್ಕರೆ ಯಾರೋಬ್ಬರು ಬೇಡ ಅಂತ ಹೇಳುವುದಿಲ್ಲ. ಆದರೆ, ಇಲ್ಲೊಬ್ಬ ಯುವಕ ಪ್ರತಿಷ್ಠಿತ ಕಂಪನಿಯಲ್ಲಿ ಸಿಕ್ಕ ಕೆಲಸವನ್ನು ಬೇಡ ಎಂದು ಹೇಳಿ ಸುದ್ದಿಯಾಗಿದ್ದಾನೆ. ಒಂದಲ್ಲ, ಎರಡಲ್ಲ ಬರೋಬ್ಬರಿ 125 ಮಿಲಿಯನ್ ಡಾಲರ್ ಆಫರ್ ನೀಡಿದರೂ ಆ ಕೆಲಸಕ್ಕೆ ನೋ ಎಂದಿದ್ದಾನೆ.
ಆ ಯುವಕನಿಗೆ ಆಫರ್ ಮಾಡಿದ್ದು ಬೇರೆ ಯಾರೂ ಅಲ್ಲ ವಿಶ್ವದ ಶ್ರೀಮಂತದಲ್ಲಿ ಒಬ್ಬರಾದ ಮೆಟಾ ಕಂಪನಿಯ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್. ಆರಂಭದಲ್ಲಿ ಮೆಟಾ ಕಂಪನಿಯಿಂದ 125 ಮಿಲಿಯನ್ ಡಾಲರ್ ಆಫರ್ ಮಾಡಲಾಗಿತ್ತು. ಆದರೆ, ಆ ಯುವಕ ಆಫರ್ ತಿರಸ್ಕರಿಸಿದನು. ಇದಾದ ಬಳಿಕ ನಡೆದ ಸಂಗತಿಯನ್ನು ಕೇಳಿದರೆ ನೀವೇ ಅಚ್ಚರಿ ಪಡುತ್ತೀರಾ! ಜಾಬ್ ಆಫರ್ ತಿರಸ್ಕರಿಸಿದ ಬಳಿಕ ಆ ಯುವಕನ್ನು ಮುಖತಃ ಭೇಟಿಯಾಗಲು ಮಾರ್ಕ್ ಜುಕರ್‌ಬರ್ಗ್ ಅವರೇ ತೆರಳಿದರು.
ಅಂದಹಾಗೆ ಆ ಯುವಕನ ಹೆಸರು ಮ್ಯಾಟ್ ಡೀಟ್ಕೆ. ವಯಸ್ಸು 24. ಈತ ಕೃತಕ ಬುದ್ಧಿಮತ್ತೆ ( ಆರ್ಟಿಫಿಶಿಯಲ್ ಇಂಟೆಲಿಜೆಂಟ್ ) ಸಂಶೋಧಕ. 125 ಮಿಲಿಯನ್ ಡಾಲರ್ ಆಫರ್ ನೀಡಿದರೂ ಮೆಟಾ ಕಂಪನಿ ಸೇರಲು ನಿರಾಕರಿಸಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಡೀಟ್ಕೆ ಆಫರ್ ತಿರಸ್ಕರಿಸಿದಾಗ, ಸ್ವತಃ ಮಾರ್ಕ್ ಜುಕರ್‌ಬರ್ಗ್ ಅವರೇ ವೈಯಕ್ತಿಕವಾಗಿ ಆ ಯುವಕನನ್ನು ಭೇಟಿಯಾಗಿ ಆಫರ್ ಅನ್ನು ಸುಮಾರು 250 ಮಿಲಿಯನ್ ಡಾಲರ್ಗೆ ಹೆಚ್ಚಿಸಿದರು ಎನ್ನಲಾಗಿದೆ. ಬಳಿಕ ಆ ಆಫರ್ಗೆ ಆತ ಒಪ್ಪಿಕೊಂಡಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದಂತೆ, ಮೊದಲ ವರ್ಷದಲ್ಲೇ ಡೀಟ್ಕೆಗೆ 100 ಮಿಲಿಯನ್ ಡಾಲರ್ವರೆಗೆ ಸಂಭಾವನೆ ಸಿಗುತ್ತದೆ.
ಮ್ಯಾಟ್ ಡೀಟ್ಕೆ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಮ್ಮ ಪಿಎಚ್‌ಡಿ ಅಧ್ಯಯನವನ್ನು ತೊರೆದಾತ. ವರದಿಯ ಪ್ರಕಾರ ಡೀಟ್ಕೆ ಕೃತಕ ಬುದ್ಧಿಮತ್ತೆ ಕಮ್ಯೂಟಿಯಲ್ಲಿ ಹೆಚ್ಚು ಬೇಡಿಕೆಯಿರುವ ಪ್ರತಿಭೆ. ಶೈಕ್ಷಣಿಕ ಕ್ಷೇತ್ರವನ್ನು ತೊರೆದ ನಂತರ, ಡೀಟ್ಕೆ ಸಿಯಾಟಲ್‌ನ ಅಲೆನ್ ಇನ್‌ಸ್ಟಿಟ್ಯೂಟ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕೆಲಸ ಮಾಡಿದರು. ಅಲ್ಲಿ ಆತ ಪಠ್ಯವನ್ನು ಮಾತ್ರವಲ್ಲದೆ ಚಿತ್ರಗಳು ಮತ್ತು ಆಡಿಯೋವನ್ನು ಸಹ ಅರ್ಥೈಸಲು ವಿನ್ಯಾಸಗೊಳಿಸಲಾದ ಚಾಟ್‌ಬಾಟ್ ಮೊಲ್ಮೊ ರಚನೆಯ ನೇತೃತ್ವ ವಹಿಸಿದರು. ಈ ಮೊಲ್ಮೊ, ಮೆಟಾದ ಗುರಿಗಳೊಂದಿಗೆ ಹೊಂದಿಕೆಯಾಗುವ ಬಹು-ಮಾದರಿ ವ್ಯವಸ್ಥೆಯಾಗಿದೆ. 3D ಡೇಟಾಸೆಟ್‌ಗಳು ಮತ್ತು AI ಮೇಲಿನ ಅವರ ಕೆಲಸವು ಅವರಿಗೆ ನ್ಯೂರಿಐಪಿಎಸ್ 2022 ರಲ್ಲಿ ಅತ್ಯುತ್ತಮ ಪೇಪರ್ ಪ್ರಶಸ್ತಿಯನ್ನು ಗಳಿಸಿತು. 10,000 ಕ್ಕೂ ಹೆಚ್ಚು ಸಲ್ಲಿಕೆಗಳಲ್ಲಿ ಕೇವಲ ಒಂದು ಡಜನ್ ಸಂಶೋಧಕರಿಗೆ ನೀಡಲಾದ ಅತ್ಯುನ್ನತ ಗೌರವ ಇದಾಗಿದೆ. NeurIPS 2022 ರಲ್ಲಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಪಡೆದ ನಂತರ ಸಂಶೋಧನಾ ಸಮುದಾಯದಲ್ಲಿ ಡೀಟ್ಕೆ ಭಾರಿ ಮನ್ನಣೆ ಪಡೆದರು.
ನವೆಂಬರ್‌ನಲ್ಲಿ, ಡೀಟ್ಕೆ ತಮ್ಮದೇಯಾದ ಸ್ಟಾರ್ಟ್‌ಅಪ್, ವರ್ಸೆಪ್ಟ್ ಅನ್ನು ಸಹ-ಸ್ಥಾಪಿಸಿದರು. ಇದು ಇಂಟರ್ನೆಟ್ ಆಧಾರಿತ ಸಾಫ್ಟ್‌ವೇರ್ ಬಳಸಿ ಸ್ವಾಯತ್ತವಾಗಿ ಕಾರ್ಯಗಳನ್ನು ನಿರ್ವಹಿಸುವ AI ಏಜೆಂಟ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ಸುಮಾರು 10 ಉದ್ಯೋಗಿಗಳನ್ನು ಹೊಂದಿರುವ ಈ ಸ್ಟಾರ್ಟ್‌ಅಪ್, ಮಾಜಿ ಗೂಗಲ್ ಸಿಇಒ ಎರಿಕ್ ಸ್ಮಿತ್ ಸೇರಿದಂತೆ ಕೆಲ ಹೂಡಿಕೆದಾರರಿಂದ 16.5 ಮಿಲಿಯನ್ ಡಾಲರ್ ಸಂಗ್ರಹಿಸಿತು.
ವರದಿಯ ಪ್ರಕಾರ, ಮೆಟಾ ತನ್ನ "ಸೂಪರ್ ಇಂಟೆಲಿಜೆನ್ಸ್" ಸಂಶೋಧನಾ ತಂಡಕ್ಕಾಗಿ 'ಆಲ್-ಸ್ಟಾರ್ ರೋಸ್ಟರ್' ಅನ್ನು ನಿರ್ಮಿಸಲು 1 ಬಿಲಿಯನ್‌ಗಿಂತಲೂ ಹೆಚ್ಚು ಡಾಲರ್ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಇದರಲ್ಲಿ ಓಪನ್‌ಎಐ, ಆಂಥ್ರೊಪಿಕ್, ಆ್ಯಪಲ್ ಮತ್ತು ಗೂಗಲ್‌ನಂತಹ ಪ್ರತಿಸ್ಪರ್ಧಿ ಸಂಸ್ಥೆಗಳಿಂದ ಎಐ ಪ್ರತಿಭೆಗಳನ್ನು ತಮ್ಮತ್ತ ಸೆಳೆಯುತ್ತಿದೆ. ಇತ್ತೀಚೆಗೆ, ಮೆಟಾ ಹಾಗೂ ಆ್ಯಪಲ್‌ನ AI ಮಾದರಿಗಳ ತಂಡದ ಮಾಜಿ ಮುಖ್ಯಸ್ಥ ರೂಮಿಂಗ್ ಪಾಂಗ್ ಅವರನ್ನು ಜುಕರ್‌ಬರ್ಗ್ ಅವರ ಸೂಪರ್‌ಇಂಟೆಲಿಜೆನ್ಸ್ ಲ್ಯಾಬ್ಸ್ ತಂಡಕ್ಕೆ ಸೇರಲು 200 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಪರಿಹಾರ ಪ್ಯಾಕೇಜ್‌ನೊಂದಿಗೆ ನೇಮಿಸಿಕೊಂಡಿದೆ. ಇದರ ಭಾಗವಾಗಿ ಡೀಟ್ಕೆ ಅವರನ್ನು ಸಹ ಜುಕರ್‌ಬರ್ಗ್ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. (ಏಜೆನ್ಸೀಸ್)