

ತಮಿಳುನಾಡು: ಇತ್ತೀಚೆಗಷ್ಟೇ 'ಲಿಯೋ' ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ್ದ ಸಹ ಕಲಾವಿದ ಮನ್ಸೂರ್ ಅಲಿ ಖಾನ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ನಟಿ ತ್ರಿಶಾ ಕೃಷ್ಣನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಷಯ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಭಾರತೀಯ ಚಿತ್ರರಂಗದ ಹಿರಿಯ ನಟರು ನಟಿಯ ಪರ ನಿಂತು, ಬೆಂಬಲಿಸಿದ್ದರು.
ಒಂದಷ್ಟು ದಿನಗಳ ಕಾಲ ಈ ವಿಷಯಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ತ್ರಿಶಾ, ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಆದ್ರೆ, ಈ ಬಾರಿ ವಿವಾದಕ್ಕೆ ಸಂಬಂಧಿಸಿದ್ದಂತಲ್ಲ, ಬದಲಿಗೆ ರಣಬೀರ್ ಕಪೂರ್ ನಟನೆಯ 'ಅನಿಮಲ್' ಚಿತ್ರ ವೀಕ್ಷಿಸಿ, ಕೊಟ್ಟ ಅಭಿಪ್ರಾಯಕ್ಕೆ ಎಂಬುದು ಗಮನಾರ್ಹ.
ದಳಪತಿ ವಿಜಯ್ ಜತೆಗೆ ಅಭಿನಯಿಸಿದ ಪ್ಯಾನ್ ಇಂಡಿಯಾ 'ಲಿಯೋ' ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡ ಸಂಭ್ರಮದಲ್ಲಿದ್ದ ನಟಿ, ಇದೀಗ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ಈ ಮಧ್ಯೆ ರಣಬೀರ್ ನಟನೆಯ 'ಅನಿಮಲ್' ಸಿನಿಮಾ ವೀಕ್ಷಿಸಿದ ತ್ರಿಶಾ, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಒಂದೇ ಒಂದು ಪದ ಬಳಸುವ ಮುಖೇನ ಚಿತ್ರವನ್ನು ವಿಮರ್ಶೆ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರದ ಪೋಸ್ಟರ್ ಹಾಕಿ, "ಒನ್ ವರ್ಡ್, ಕಲ್ಟ್!" ಎಂದು ಬರೆದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಿನಿಮಾಗೆ ನಟಿ ನೀಡಿದ ಮೆಚ್ಚುಗೆ ಕುರಿತು ರಣಬೀರ್ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).