

ನವದೆಹಲಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಪ್ರಚಾರದ ಅಬ್ಬರ ಜೋರಾಗುತ್ತಿದೆ. ಕುಟುಂಬ ರಾಜಕಾರಣದ ವಿಷಯ ಮುನ್ನೆಲೆಗೆ ಬರುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಕುಟುಂಬದ ಮೂರನೇ ತಲೆಮಾರಿನವರು ಪ್ರಚಾರಕ್ಕೆ ಬಂದಿದ್ದಾರೆ.
ಮೈನ್‌ಪರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ತಮ್ಮ ಪುತ್ರಿ ಅದಿತಿ ಯಾದವ್ ಅವರ ಮೂಲಕ ಪ್ರಚಾರ ನಡೆಸುತ್ತಿದ್ದು, ಮತದಾರರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಲಂಡನ್ ನಲ್ಲಿ ವ್ಯಾಸಂಗ ಮುಗಿಸಿ ರಜೆಯ ಮೇಲೆ ಮನೆಗೆ ಬಂದಿರುವ ಅದಿತಿ ತನ್ನ ತಾಯಿಯ ಪರ ಪ್ರಚಾರ ನಡೆಸುತ್ತಿದ್ದಾಳೆ. ಹರಿತವಾದ ಮಾತಿನ ಮೂಲಕ ಮತದಾರರ ಮನಸೆಳೆಯುವ ಅದಿತಿಯನ್ನು ಕಂಡು ಮತದಾರರು ಬೆರಗಾಗುತ್ತಿದ್ದಾರೆ.
ಮುಲಾಯಂಸಿಂಗ್ ನಿಧನದ ನಂತರ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದರು. ಸದ್ಯ ಮೈನ್‌ಪರಿ ಸಂಸದೆಯಾಗಿರುವ ಡಿಂಪಲ್ ಗೆಲುವು ಈ ಬಾರಿ ಸುಲಭವಲ್ಲ ಎಂಬ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಅದಿತಿ ತಮ್ಮ ಭಾಷಣದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ.‘