ಯೂಕ್ರೇನ್ ಬಿಕ್ಕಟ್ಟು ತಾರಕಕ್ಕೆ: ದಾಳಿ ತೀವ್ರ ಸಾಧ್ಯತೆ; 3ನೇ ಮಹಾಯುದ್ಧ ಎಂದ ರಷ್ಯಾ ಸರ್ಕಾರಿ ಟಿವಿ

Ukraine
ಯೂಕ್ರೇನ್​ನ ಕಾರ್ಖೀವ್​ನಲ್ಲಿ ರಷ್ಯಾ ಕ್ಷಿಪಣಿ ದಾಳಿಗೆ ತುತ್ತಾಗಿರುವ ಕಟ್ಟಡದ ದೃಶ್ಯ.
Published on

ಕಿಯೆವ್/ಮಾಸ್ಕೋ: ಯೂಕ್ರೇನ್ ಮೇಲೆ ದಾಳಿ ನಡೆಸಲು ಬಳಸುತ್ತಿದ್ದ ಸಮರ ನೌಕೆ ಮೋಸ್ಕವ ಧ್ವಂಸಗೊಳಿಸಿದ ಕಾರಣಕ್ಕೆ ರಷ್ಯಾ ಕೆರಳಿದೆ. ನೌಕೆ ನಷ್ಟವನ್ನು ಸಾಂಕೇತಿಕ ಸೋಲು ಎಂದು ಜಗತ್ತು ಪರಿಗಣಿಸುತ್ತಿರುವ ಕಾರಣ, ಯೂಕ್ರೇನ್ ಮೇಲೆ ದಾಳಿ ತೀವ್ರಗೊಳಿಸುವುದಾಗಿ ರಷ್ಯಾ ಎಚ್ಚರಿಸಿದೆ. ಇದೇ ವೇಳೆ, ರಷ್ಯಾದ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ, ಮೋಸ್ಕವ ನೌಕೆ ನಷ್ಟವಾಗುವುದರೊಂದಿಗೆ ಮೂರನೇ ಮಹಾಯುದ್ಧ ಶುರುವಾಗಿದೆ ಎಂದು ಘೋಷಿಸಿದೆ.

ಗಡಿಭಾಗಕ್ಕೆ ಸಮೀಪದ ಬ್ರಾ್ಯನ್​ಸ್ನ ವಸತಿ ಕಟ್ಟಡಗಳ ಮೇಲೆ ಯೂಕ್ರೇನ್ ಸೇನೆ ದಾಳಿ ನಡೆಸುತ್ತಿದೆ. ಗುರುವಾರದ ದಾಳಿಗೆ ಏಳು ಜನ ಗಾಯಗೊಂಡಿದ್ದಾರೆ ಎಂದು ಆರೋಪಿಸಿರುವ ರಷ್ಯಾ ಸೇನೆ, ಕಿಯೆವ್ ಮೇಲೆ ದಾಳಿ ತೀವ್ರಗೊಳಿಸುವುದಾಗಿ ಎಚ್ಚರಿಸಿದೆ. ಕಿಯೆವ್ ಅನ್ನು ಸ್ವಾಧೀನ ಪಡಿಸುವ ರಷ್ಯಾದ ಪ್ರಯತ್ನಕ್ಕೆ ಭಾರಿ ಹಿನ್ನಡೆ ಆಗಿದೆ. ದಾಳಿಯ ತೀವ್ರತೆ ಕಡಿಮೆ ಆಗಿರುವ ಕಾರಣ, ಕಿಯೆವ್​ನಲ್ಲಿ ಜನಜೀವನ ಮತ್ತೆ ಸಹಜತೆ ಕಡೆಗೆ ಮರಳುತ್ತಿದೆ. ರಷ್ಯಾ ಸೇನೆ ಕಿಯೆವ್ ಕಡೆಗೆ ಮುನ್ನಡೆಯದೇ ಉತ್ತರ ಯೂಕ್ರೇನ್ ಭಾಗದ ಪ್ರದೇಶಗಳನ್ನು ವಶಪಡಿಸುವತ್ತ ಗಮನಕೇಂದ್ರೀಕರಿಸಿದೆ. ಮತ್ತೆ ದಾಳಿ ನಡೆಸುವ ಎಚ್ಚರಿಕೆ ಬಂದಿರುವ ಕಾರಣ, ನಗರ ನಿವಾಸಿಗಳು ಮತ್ತೆ ಸಬ್​ವೇಗಳು ಮತ್ತು ಬಂಕರ್ ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.

ಐದೇ ದಿನದಲ್ಲಿ ಕಿಯೆವ್ ಅನ್ನು ವಶಪಡಿಸುತ್ತೇವೆ ಎಂದು ರಷ್ಯಾ ಹೇಳಿತ್ತು. ಆದಾಗ್ಯೂ, ನಾವು 50 ದಿನಗಳ ಕಾಲ ಹೋರಾಟ ನಡೆಸಿದರೂ ಕಿಯೆವ್ ವಶಪಡಿಸುವ ಪ್ರಯತ್ನದಲ್ಲಿ ರಷ್ಯಾ ಸೋಲು ಅನುಭವಿಸಿದೆ. ಇದು ಜೀವನ್ಮರಣದ ಹೋರಾಟವಾಗಿದ್ದು, ಇದರಲ್ಲಿ ಲಕ್ಷಾಂತರ ಯೂಕ್ರೇನಿಯನ್ನರ ಪಾಲಿದೆ. ಅವರ ಸಾಧನೆ ಇದು. | ವೊಲೊದಿಮಿರ್ ಝೆಲೆನ್​ಸ್ಕಿ ಯೂಕ್ರೇನ್ ಅಧ್ಯಕ್ಷ

ಮಹಾಯುದ್ಧ ಶುರು?: ರಷ್ಯಾ ಒನ್ ಎಂಬ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್, ಮೂರನೇ ವಿಶ್ವ ಮಹಾಯುದ್ಧ ಶುರುವಾಗಿದೆ ಎಂದು ಘೋಷಿಸಿದೆ. ಮೋಸ್ಕವ ನೌಕೆ ಧ್ವಂಸವಾದ ಕಾರಣ, ಈಗ ನಡೆಯುತ್ತಿರುವ ಯುದ್ಧ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಇದು ಖಚಿತವಾಗಿಯೂ ಮಹಾಯುದ್ಧವೇ ಆಗಿದೆ. ನಾವು ಈಗ ನ್ಯಾಟೋ ಮೇಲಷ್ಟೇ ಅಲ್ಲ, ನ್ಯಾಟೋ ಮೂಲಸೌಕರ್ಯಗಳ ಮೇಲೂ ಹೋರಾಟ ನಡೆಸುತ್ತಿದ್ದೇವೆ ಎಂದು ನಿರೂಪಕಿ ಓಲ್ಗಾ ಸ್ಕಬೆಯೆವಾ ತಣ್ಣಗೆ ಹೇಳಿದ್ದಾರೆ. ಆದರೆ, ನೌಕೆಯಲ್ಲಿ ತಾಂತ್ರಿಕ ದೋಷದಿಂದ ಸ್ಫೋಟ ಉಂಟಾಗಿ ಧ್ವಂಸವಾಗಿದೆ ಎಂದು ರಷ್ಯಾ ಘೋಷಿಸಿತ್ತು. ಟಿವಿ ಪ್ಯಾನೆಲ್ ಚರ್ಚೆಯ ಈ ವಿಡಿಯೋ ತುಣುಕು ಈಗ ವೈರಲ್ ಆಗಿದೆ.

2ನೇ ಎಸ್-400 ಕ್ಷಿಪಣಿ ಭಾರತಕ್ಕೆ ಶೀಘ್ರ ಪೂರೈಕೆ: ಯೂಕ್ರೇನ್ ಮೇಲೆ ರಷ್ಯಾ ಸಮರ ಸಾರಿದ್ದರೂ, ಈಗಾಗಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ಭಾರತಕ್ಕೆ ಎರಡನೇ ಎಸ್-400 ಕ್ಷಿಪಣಿ ನಿರೋಧಕ ಉಪಕರಣವನ್ನು ರವಾನಿಸಲು ರಷ್ಯಾ ಕ್ರಮ ತೆಗೆದುಕೊಂಡಿದೆ. ಮೊದಲ ಎಸ್- 400 ಸ್ಕಾ್ವಡ್ರನ್ 2021ರ ಡಿಸೆಂಬರ್​ನಲ್ಲಿ ಭಾರತಕ್ಕೆ ಬಂದಿದೆ. ಇದನ್ನು ಪಂಜಾಬ್​ನ ಗಡಿಯಲ್ಲಿ ನಿಯೋಜಿಸಲಾಗಿದೆ.

ಸಾಮರ್ಥ್ಯ ಏನು?: 400 ಕಿ.ಮೀ. ದೂರದಲ್ಲಿರುವ ಮತ್ತು 30 ಕಿ.ಮೀ ಎತ್ತರದಿಂದ ದಾಳಿಗೆ ಚಿಮ್ಮಿಬರುತ್ತಿರುವ ಶತ್ರುಪಡೆಯ ಬಾಂಬರ್​ಗಳು, ಯುದ್ಧವಿಮಾನ, ಕ್ಷಿಪಣಿ, ಡ್ರೋನ್, ಗೂಢಚರ್ಯು ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ಎಸ್-400ಗೆ ಇದೆ. ಜತೆಗೆ ಆಧುನಿಕ ರೆಡಾರ್​ಗಳ ಸಹಾಯದಿಂದ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಮರಿಯುಪೋಲ್​ನಲ್ಲಿ ಇನ್ನಷ್ಟು ಸಮಾಧಿ: ಯೂಕ್ರೇನ್​ನ ಮರಿಯುಪೋಲ್ ನಗರದಲ್ಲಿ ಹಾನಿಗೀಡಾದ ಕಟ್ಟಡಗಳ ಅವಶೇಷ ಕಣ್ಣಿಗೆ ರಾಚುತ್ತಿದೆ. ಅಲ್ಲಲ್ಲಿ, ಶವಗಳು, ಅರೆಮುಚ್ಚಿದ ಸಮಾಧಿಗಳು ನೋಡುಗರನ್ನು ಕಂಗೆಡಿಸುವಂತೆ ಇದೆ ಎಂದು ಮಾನವೀಯ ನೆರವು ಒದಗಿಸಲು ಓಡಾಡುತ್ತಿರುವ ಕಾರ್ಯಕರ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಂದರು ನಗರಿಯನ್ನು ರಷ್ಯಾ ಸೇನೆ ಸುತ್ತುವರಿದಿದ್ದು, ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ ಎಂದು ಘೋಷಿಸಿದೆ. ಈ ಬಂದರು ನಗರಿಯು ರಷ್ಯಾ ನಿಯಂತ್ರಿತ ಕ್ರಿಮಿಯಾವನ್ನು ರಷ್ಯಾ ಪರ ಬಂಡುಕೋರರಾದ ಡೊನ್​ಬಾಸ್ ಪ್ರಾಂತ್ಯಕ್ಕೆ ಜೋಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net