

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಗಣನೀಯ ಪ್ರಗತಿ ಸಾಧಿಸಿದ್ದು, 2021ರ ಏಪ್ರಿಲ್ನಿಂದ 2022 ಮಾರ್ಚ್ ಅಂತ್ಯದವರೆಗೆ 85 ಸಾವಿರ ಕೋಟಿ ರೂ.ನಷ್ಟು ಸಂಗ್ರಹಿಸಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
ಮಹಾರಾಷ್ಟ್ರ ಮತ್ತು ಗುಜರಾತ್ ಮೊದಲ ಎರಡು ಸ್ಥಾನದಲ್ಲಿವೆ. ಕರೊನಾ ಎರಡನೇ ಅಲೆಯ ಹೊಡೆತದಿಂದ ಹಂತಹಂತವಾಗಿ ಚೇತರಿಸಿಕೊಂಡ ರಾಜ್ಯವು 2021ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಕಂಡಿದೆ.
2021ರಲ್ಲಿ ಏಪ್ರಿಲ್- ಮೇನಲ್ಲಿ ಕರೊನಾ ಹಾಗೂ ಲಾಕ್ಡೌನ್ ಕಾರಣಕ್ಕೆ ಜಿಎಸ್ಟಿ ಸಂಗ್ರಹದ ಮೇಲೆ ಗಾಢ ಪರಿಣಾಮ ಬೀರಿತ್ತು. ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆಯಾಗಿ ರಫ್ತು ಹೆಚ್ಚಾಗುತ್ತಿದ್ದಂತೆ ಜಿಎಸ್ಟಿ ಕೂಡ ಗಣನೀಯವಾಗಿ ವೃದ್ಧಿಯಾಗಿರುವುದು ಕಾಣಿಸಿತು.
ಅಧಿಕಾರಿಗಳು ವಿವರಿಸುವಂತೆ ಕೋವಿಡ್ ಆತಂಕ ಇಲ್ಲದಿದ್ದರೆ ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಪ್ರಗತಿ ಸಾಧ್ಯವಿತ್ತು, ಆದರೂ ನಿಧಾನವಾಗಿ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಕಾಣಿಸಿರುವ ಪ್ರತಿಬಿಂಬವೇ ಈ ಅಂಕಿ ಸಂಖ್ಯೆ ಎಂದು ವಿವರಿಸಿದರು.
ಜನವರಿಯಲ್ಲಿ ದೇಶದ ಜಿಎಸ್ಟಿ ಸಂಗ್ರಹ 1,40,986 ಕೋಟಿ ರೂ. ಆಗಿತ್ತು. ಮಾರ್ಚ್ನಲ್ಲಿ 1,42,095 ಕೋಟಿ ರೂ. ತಲುಪಿದೆ. ಈ ಬೆಳವಣಿಗೆಯು ಸಮಾಧಾನ ತರುವ ಸಂಗತಿ ಎಂದು ವಿವರಿಸುವ ಅವರು, ಜಿಎಸ್ಟಿ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕುವುದು ಹಾಗೂ ಜಿಎಸ್ಟಿ ವ್ಯಾಪ್ತಿಯಿಂದ ಹೊರಗುಳಿದ ದೊಡ್ಡ ಸಮುದಾಯ ಸೇರ್ಪಡೆಯಾದರೆ ದೇಶದ ತೆರಿಗೆ ಸಂಗ್ರಹ ಇನ್ನಷ್ಟು ಸಮೃದ್ಧವಾಗಲಿದೆ ಎಂದು ತಿಳಿಸಿದರು.