ಅನರ್ಹ ಪಡಿತರ ಚೀಟಿ ಪತ್ತೆಗೆ ಥರ್ಡ್ ಪಾರ್ಟಿ ಸರ್ವೇ

padithara card
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಷ್ಟ್ರೀಯ ಆಹಾರ ಕಾಯ್ದೆ ಉಲ್ಲಂಸಿ ಮತ್ತು ಅನರ್ಹ ಪಡಿತರ ಚೀಟಿ ಪತ್ತೆ ಸಲುವಾಗಿ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಸರ್ವೇಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಅರ್ಹ ಕುಟುಂಬಕ್ಕೆ ಪಡಿತರ ವಿತರಣೆ ಮಾಡುವುದರ ಜತೆಗೆ ಅನರ್ಹರನ್ನು ಹೊರ ಹಾಕಲು ತಂತ್ರ ರೂಪಿಸಿದೆ.

ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪ್ರಸ್ತಾಪ ಮಾಡಿದ್ದು, ಇದಕ್ಕೆ ಬಹುತೇಕ ಸಚಿವರು ಸಮ್ಮತಿಸಿದ್ದಾರೆ. 2011ರ ಜನಸಂಖ್ಯೆ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 11,99,700 ಅಂತ್ಯೋದಯ (ಎಎವೈ) ಕುಟುಂಬಗಳು ಸೇರಿ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಿದೆ. ಆದಗ್ಯೂ ರಾಜ್ಯದಲ್ಲಿ ಆದ್ಯತಾ ಕುಟುಂಬ (ಪಿಎಚ್‌ಎಚ್) ಮತ್ತು ಎಎವೈ 44 ಲಕ್ಷಕ್ಕೂ ಹೆಚ್ಚು ಇರುವುದು ಕಂಡು ಬಂದಿದೆ. ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಆದರೆ, ದೇಶದಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ, ಅಧಿಕ ಪಡಿತರ ಚೀಟಿ ಹೊಂದಿರುವ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.

ಜಿಲ್ಲಾವಾರು ವಿತರಣೆಯು ಮತ್ತು ಹಿಂದುಳಿದ ಜಿಲ್ಲೆಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ಕಡಿಮೆ ಮಾನವ ಅಭಿವೃದ್ಧಿ ಸೂಚಕಗಳನ್ನು ಹೊಂದಿರುವ ಕಲಬುರಗಿಯಲ್ಲಿ ಶೇ.67, ಬೀದರ್ ಶೇ.69 ಮತ್ತು ಬಿಜಾಪುರ ಶೇ.69 ಜಿಲ್ಲೆಗಳಿಗೆ ಹೊಲಿಸಿದರೆ ಮಂಡ್ಯ ಶೇ.91, ರಾಮನಗರ ಶೇ.89 ಮತ್ತು ಹಾಸನ ಶೇ.87 ಜಿಲ್ಲೆಗಳಲ್ಲಿ ಎಎವೈ/ಪಿಎಚ್‌ಎಚ್ ಪಡಿತರ ಚೀಟಿದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ತೆರಿಗೆ ಸಂಗ್ರಹವಾಗುವ ಮತ್ತು ಮುಂದುವರಿದ ಜಿಲ್ಲೆಗಳಲ್ಲಿಯೇ ಹೆಚ್ಚಿನ ಪಡಿತರ ಚೀಟಿಗಳಿರುವುದು ಸೋಜಿಗ ವಿಷಯವಾಗಿದೆ. ಅರ್ಹರಿಗೆ ಸರ್ಕಾರದ ಸವಲತ್ತು ಸಿಗುತ್ತಿಲ್ಲ. ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ದತ್ತಾಂಶಗಳಾದ ಭೂಮಿ, ಇ-ವಾಹನ್, ಇಪಿಎಸ್, ಟಿಡಿಎಸ್, ಜಿಎಸ್‌ಟಿ, ಸರ್ಕಾರಿ ನೌಕರರ ಡೇಟಾಬೇಸ್, ನಗರದ ಆಸ್ತಿ ಡೇಟಾಬೇಸ್ ಆದ ಇ-ಆಸ್ತಿ ಸೇರಿ ಸರ್ಕಾರದ ಅಧಿಕೃತ ದತ್ತಾಂಶ ಇಟ್ಟುಕೊಂಡು ಅನರ್ಹ ಪಡಿತರ ಚೀಟಿದಾರರನ್ನು 3ನೇ ವ್ಯಕ್ತಿಯಿಂದ ಸರ್ವೇ ನಡೆಸಿ ವರದಿ ಪಡೆದು ಒಪ್ಪಿಸಿ ಎಂದು ಆಹಾರ ಮತ್ತು ಸರಬರಾಜು ಇಲಾಖೆ ಸಚಿವರಿಗೆ ಮತ್ತು ಅಧಿಕಾರಿಗೆ ಸೂಚನೆ ನೀಡಿದರು.

ಬೇಳೆ, ಎಣ್ಣೆ ವಿತರಣೆ ಮಾಡಿದರೆ ಹೇಗೆ?

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಒಂದು ಮನೆಯಲ್ಲಿ ಕನಿಷ್ಠ 4 ಜನ ಇದ್ದರೆ 20 ಕೆಜಿ ಅಕ್ಕಿ ಸಿಗಲಿದೆ. ವೈಜ್ಞಾನಿಕವಾಗಿ ತಾಳೆ ಮಾಡಿದಾಗ ತಿಂಗಳಲ್ಲಿ ಅಷ್ಟು ಖರ್ಚು ಆಗುವುದಿಲ್ಲ. ಆದ್ದರಿಂದ ಕಾಳ ಸಂತೆಕೋರರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಪಡಿತರ ಅಕ್ಕಿ ಖರೀದಿಸಿ ಮಿಲ್‌ನಲ್ಲಿ ಪಾಲಿಷ್ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಜನರಿಗೆ ಅಗತ್ಯ ಇರುವ ಬೇಳೆ, ಎಣ್ಣೆ ಅಥವಾ ಹಣ ನೀಡಿದರೆ ಸರ್ಕಾರಕ್ಕೆ ಎಷ್ಟು ಹೊರೆ ಬರಲಿದೆ ಎಂಬುದರ ವರದಿ ಒಪ್ಪಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಬಿಪಿಎಲ್‌ನಿಂದ ಎಪಿಎಲ್‌ಗೆ

ಥರ್ಡ್‌ಪಾರ್ಟಿ ಸರ್ವೇಯಲ್ಲಿ ಅನರ್ಹರು ಎಂದು ಗೊತ್ತಾದ ಕೂಡಲೇ ಅವರ ಕಾರ್ಡ್ ರದ್ದು ಮಾಡುವುದು ಬೇಡ. ಅವರನ್ನು ಎಪಿಎಲ್‌ಗೆ ವರ್ಗಾಯಿಸಿದರೆ ಸಾಕು ಎಂದು ಪ್ರಮುಖ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ. ಮತ್ತೊಬ್ಬ ಸಚಿವರು, ಪ್ರಾಯೋಗಿಕವಾಗಿ ಒಂದು ಜಿಲ್ಲೆಯಲ್ಲಿ ಜಾರಿಗೆ ತಂದು ಆನಂತರ ಹಂತ ಹಂತವಾಗಿ ಎಲ್ಲೆಡೆ ಅನರ್ಹರನ್ನು ಹೊರ ಹಾಕುವ ಕೆಲಸ ಆಗಬೇಕೆಂದು ಕೊಟ್ಟ ಸಲಹೆಗೆ ಮುಖ್ಯಮಂತ್ರಿ ಸಮ್ಮಿತಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೆಚ್ಚು ಪಡಿತರ ಚೀಟಿ ಇರುವ ಮೊದಲ 5 ಜಿಲ್ಲೆಗಳು

ಜಿಲ್ಲೆ      ಅಂದಾಜು ಜನಸಂಖ್ಯೆ     ಎಎವೈ        ಪಿಎಚ್‌ಎಚ್        ಶೇಕಡವಾರು

ಮಂಡ್ಯ  16,92,783              1,38,011     13,93,794           ಶೇ.90.50

ರಾಮನಗರ 10,49,431         75,129         8,54,834            ಶೇ.88.60

ಹಾಸನ    16,82,105            95,360        7,33,691            ಶೇ.86.90

ಚಾಮರಾಜನಗರ   9,97,771    1,31,745      8,65436           ಶೇ.86.70

ತುಮಕೂರು 25,51,680         1,94,464      19,88,319         ಶೇ.85.50

ಅನರ್ಹತೆಗೆ ಮಾನದಂಡಗಳು

*ವಾರ್ಷಿಕ ಆದಾಯ 1.20 ಲಕ್ಷಗಿಂತ ಹೆಚ್ಚಿರುವ ಕುಟುಂಬ

* 3 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಹೊಂದಿದವರು

* 1 ಸಾವಿರ ಚದುರಡಿ ಪಕ್ಕಾ ಮನೆ ಹೊಂದಿದ್ದರೆ

* ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಥೆಗಳಲ್ಲಿ ನೌಕರರು

* ಆದಾಯ, ವೃತ್ತಿ ತೆರಿಗೆ, ಜಿಎಸ್‌ಟಿ ಪಾವತಿದಾರರು

* ವಾಣಿಜ್ಯೇತರ ವಾಹನ ಹೊಂದಿದವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net