

ಬೂಸ್ಟರ್ ಲಸಿಕೆ: ಅಮೆರಿಕದಲ್ಲಿ ಈವರೆಗೆ ಶೇಕಡ 50 ಜನರು ಮಾತ್ರ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಗರ್ಭಿಣಿಯರಿಗೆ ಲಸಿಕೆ ಪಡೆಯಲು ಅನುಮತಿ ಕೊಡಲಾಗಿದೆ. ಸದ್ಯದಲ್ಲಿಯೇ ಫೈಜರ್ ಮತ್ತು ಮಾಡರ್ನಾ ಕಂಪನಿಗಳ ಮೂರನೇ ಡೋಜ್ ಬೂಸ್ಟರ್ ಲಸಿಕೆಗೆ ಅನುಮತಿ ಸಿಗುವ ಲಕ್ಷಣ ಕಾಣುತ್ತಿವೆ. ಈಗಾಗಲೇ ಇಸ್ರೇಲ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಬೂಸ್ಟರ್ ಲಸಿಕೆಗೆ ಅನುಮತಿ ಕೊಟ್ಟಿವೆ.
ಭಾರತದ ‘ಆರೋಗ್ಯ ಮಿತ್ರ’ ಆಪ್ ರೀತಿಯಲ್ಲಿ ‘ಎಹತರಾಜ್’ ಆಪ್ ರೂಪಿಸಲಾಗಿದ್ದು, ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವುದು ಕಡ್ಡಾಯ. ಮಾಸ್ಕ್ ಧರಿಸದ 357, ವೈಯಕ್ತಿಕ ಅಂತರ ಪಾಲಿಸದ 11 ಹಾಗೂ ಎಹತರಾಜ್ ಆಪ್ ಡೌನ್ಲೋಡ್ ಮಾಡಿಕೊಳ್ಳದ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಸೀದಿಗಳು ಎಲ್ಲ ವಯೋಮಾನದವರಿಗೂ ಮುಕ್ತವಾಗಿದ್ದು, ಮಕ್ಕಳಿಗಿದ್ದ ನಿರ್ಬಂಧ ತೆರವು ಮಾಡಲಾಗಿದೆ. ಒಟ್ಟಾರೆ ಕತಾರ್ನಲ್ಲಿ ಕೋವಿಡ್ ಬಹುತೇಕ ನಿಯಂತ್ರಣದಲ್ಲಿದ್ದು, ಜನಜೀವನ ವೇಗವಾಗಿ ಸಹಜತೆಯತ್ತ ಸಾಗುತ್ತಿದೆ. ಪಾರ್ಕ್, ಬೀಚ್ ಮುಂತಾದೆಡೆ ಜನಸಂದಣಿಯ ಅವಕಾಶವನ್ನು 15ರಿಂದ 20ಕ್ಕೆ ಹೆಚ್ಚಿಸಲಾಗಿದೆ, ಬೋಟ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು 20ರಿಂದ 25ಕ್ಕೆ ಹೆಚ್ಚಿಸಲಾಗಿದೆ ಹಾಗೂ ಲಸಿಕೆ ಪಡೆದವರಿಗೆ ಸಂಘಟಿತ ಕ್ರೀಡಾ ತರಬೇತಿ ಪಡೆಯುವವರ ಸಂಖ್ಯೆಯನ್ನು 30ರಿಂದ 35ಕ್ಕೆ ಹೆಚ್ಚಿಸಲಾಗಿದೆ.
ಜಪಾನ್ನಲ್ಲಿ ಹೆಚ್ಚಳ: ಜಪಾನ್ನಲ್ಲಿ ಕಳೆದ 15 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 20ರಷ್ಟು ಹೆಚ್ಚಿದೆ. ಕಳೆದ ಒಂದು ವಾರದಿಂದ ದಿನವೂ ಸರಾಸರಿ 10 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಜರ್ಮನಿಯಲ್ಲಿ ನಾಲ್ಕನೇ ಅಲೆ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿ ದೈನಂದಿನ ಪ್ರಕರಣಗಳ ಸರಾಸರಿ ಸಂಖ್ಯೆ 5 ಸಾವಿರ ಮೀರುತ್ತಿದೆ.
ಒಟ್ಟು 70 ಲಕ್ಷ ಜನ ಇಡೀ ಆಫ್ರಿಕಾದಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಕೆಲವು ದೇಶಗಳಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಕರೊನಾ ಹತೋಟಿಯಲ್ಲಿದೆ. ನಾನಿರುವ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ 6 ಕೋಟಿ ಜನಸಂಖ್ಯೆ ಇದ್ದರೂ ಸೋಂಕಿತರ ಸಂಖ್ಯೆ 1500ನ್ನೂ ದಾಟಿಲ್ಲ. ಲಾಕ್ಡೌನ್ ಅಂತೂ ಇಲ್ಲಿಯವರೆಗೂ ಕೇಳೇ ಇಲ್ಲ. ಈ ಭಾಗದಲ್ಲಿರುವ ಇತರ ದೇಶಗಳ ಜನರೂ ಯಾವುದೇ ರೀತಿಯ ಭೀತಿಗೆ ಒಳಗಾಗದೇ ಸಾಮಾನ್ಯ ರೀತಿಯ ಜೀವನ ಮುಂದುವರಿಸಿದ್ದಾರೆ. ಈ ದೇಶಗಳಲ್ಲಿರುವ ಯುರೋಪಿಯನ್ ಸಮುದಾಯ ಮತ್ತು ಕೆಲ ಮಟ್ಟಿಗೆ ಏಷ್ಯನ್ ಸಮುದಾಯದ ಜನರು ಮಾತ್ರ ಮಾಸ್ಕ್ ಧರಿಸುವುದು ಸೇರಿ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆಫ್ರಿಕಾದ ಯಾವುದೇ ದೇಶದಲ್ಲೂ ಲಸಿಕೆ ಆಂದೋಲನ ವೇಗವಾಗಿ ಸಾಗುತ್ತಿಲ್ಲ. ಈಜಿಪ್ಟ್, ನೈಜೀರಿಯಾ, ದಕ್ಷಿಣ ಆಫ್ರಿಕಾದಂಥ ಕೆಲವು ದೇಶಗಳನ್ನು ಬಿಟ್ಟರೆ ಬಹಳಷ್ಟು ದೇಶಗಳಿಗೆ ವಾಕ್ಸಿನ್ ಖರೀದಿ ದುಬಾರಿ ಎನಿಸಿದೆ. ಸಿರಿವಂತ ದೇಶಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆ ಉಚಿತವಾಗಿ ನೀಡಿದರೆ ನಮ್ಮ ಜನರಿಗೆ ಲಸಿಕೆ ಹಾಕುತ್ತೇವೆ ಎಂಬುದು ಕೆಲ ಸರ್ಕಾರಗಳ ಅಘೊಷಿತ ನೀತಿಯಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲೆಂದೇ ದುಬೈಗೆ ಹೋದವರಿದ್ದಾರೆ.
ಭಾರತೀಯ ಮೂಲದವರು ತವರು ರಾಜ್ಯಕ್ಕೆ ಬಂದು ತಿಂಗಳಿದ್ದು, ಎರಡು ಲಸಿಕೆ ತೆಗೆದುಕೊಂಡದ್ದೂ ಇದೆ. ಉತ್ತರದ ತುದಿಯಲ್ಲಿರುವ ಪುಟ್ಟ ದೇಶಗಳಾದ ಮೊರೊಕ್ಕೊ ಮತ್ತು ಟ್ಯೂನಿಷಿಯಾ ಸೋಂಕಿತರ ಬೆಳವಣಿಗೆ ದೃಷ್ಟಿಯಿಂದ ಅಪಾಯದ ಅಂಚಿನಲ್ಲಿವೆ. ನಂತರದ ಸ್ಥಾನದಲ್ಲಿ ಲಿಬಿಯಾ ಮತ್ತು ಇಥಿಯೋಪಿಯಾಗಳಿವೆ. ಪೂರ್ವ ಮತ್ತು ಮಧ್ಯ ಆಫ್ರಿಕಾದ ಬಹುತೇಕ ದೇಶಗಳು ಆತಂಕದಿಂದ ದೂರ ಇವೆ. ಇಲ್ಲಿಯವರೆಗೆ ಲಸಿಕೆಯ 9 ಕೋಟಿ ಡೋಸ್ಗಳು ಆಫ್ರಿಕಾ ತಲುಪಿವೆ. ಆದರೆ ಆಫ್ರಿಕಾದ ಒಟ್ಟು ಜನಸಂಖ್ಯೆ 130 ಕೋಟಿ ಎಂಬುದನ್ನು ಗಮನಿಸಿದರೆ ಇದು ತೀರಾ ಕಡಿಮೆ ಎನಿಸುತ್ತದೆ. ಆರ್ಥಿಕತೆ ದುರ್ಬಲವಾಗಿರುವ ಕಾರಣ ತೀವ್ರ ಪ್ರಮಾಣದ ಲಾಕ್ಡೌನ್ ಇತ್ಯಾದಿ ಕಠಿಣ ಕ್ರಮಗಳನ್ನು ಅನುಸರಿಸುವುದನ್ನು ಇಲ್ಲಿನ ಸರ್ಕಾರಗಳೂ ಬಯಸುವುದಿಲ್ಲ. ರೂಪಾಂತರಿ ವೈರಾಣು ಹರಡಿದಾಗ ಸ್ಥಿತಿ ಹೀಗೆಯೇ ಇರುತ್ತದೆ ಎಂದು ಹೇಳುವಂತಿಲ್ಲ. ಏಕೆಂದರೆ ಅಲ್ಜೀರಿಯಾ, ನಮೀಬಿಯಾ, ಕೀನ್ಯಾ ಸೇರಿದಂತೆ ಆರೇಳು ರಾಷ್ಟ್ರಗಳಲ್ಲಿ ಕರೊನಾ ತೀವ್ರಗತಿಯಲ್ಲಿ ಹರಡುತ್ತಿರುವ ವರದಿಗಳಿವೆ.
ಸೋಮವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕೋವಿಡ್ ಸೋಂಕಿನ 32,937 ಹೊಸ ಕೇಸ್ಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,22,25,513ಕ್ಕೆ ಏರಿದೆ. 417 ಜನರು ಬಲಿಯಾಗಿದ್ದು ಸಾವಿನ ಸಂಖ್ಯೆ 4,31,642ಕ್ಕೆ ಏರಿದೆ. ದೇಶದಲ್ಲಿ ಒಟ್ಟು 3,81,947 ಸಕ್ರಿಯ ಪ್ರಕರಣಗಳಿದ್ದು ಅದು ಒಟ್ಟು ಸೋಂಕಿನ ಶೇಕಡ 1.18 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಚೇತರಿಕೆ ದರ ಕಳೆದ ವರ್ಷದ ಮಾರ್ಚ್ ನಂತರ ಅತಿ ಹೆಚ್ಚು, ಅಂದರೆ ಶೇ. 97.48 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ.2.79 ಆಗಿದ್ದು ಕಳೆದ 21 ದಿನಗಳಿಂದ ಶೇಕಡ 3ಕ್ಕಿಂತ ಕೆಳಗಿದೆ. ದೇಶದಲ್ಲಿ ಇದುವರೆಗೆ 49,48,05,652 ಕೋವಿಡ್ ಪರೀಕ್ಷೆ ನಡೆಸಲಾಗಿದೆ.