ಮುಡಾ ಸಮಿತಿ ರದ್ದುಗೊಳಿಸಲು ಚಿಂತನೆ : ಸಚಿವ ಡಾ.ಎಚ್.ಸಿ. ಮಹದೇವಪ್ಪ

muda
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯನ್ನು ಶಾಶ್ವತವಾಗಿ ರದ್ದುಗೊಳಿಸಿ ಹಳೆಯ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

‘ಮುಡಾದಲ್ಲಿ ಸದಸ್ಯರಾಗಿರುವ ಬಹುತೇಕ ಜನಪ್ರತಿನಿಧಿಗಳು ಲ್ಯಾಂಡ್ ಡೆವಲ್ಪರ್‌ಗಳಾಗಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಪುನರಚನೆಗೆ ಸರ್ಕಾರದ ಹಂತದಲ್ಲಿ ಚಿಂತನೆ ಇದೆಯೇ?’ ಎಂಬ ಪ್ರಶ್ನೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಸಚಿವ ಮಹದೇವಪ್ಪ, ಈ ಕುರಿತು ಚಿಂತನೆ ನಡೆಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಸಹ ನಡೆಸಲಾಗಿದ್ದು, ಅವರು ಸಹ ಈ ಬಗ್ಗೆ ಒಲವು ತೋರಿದ್ದಾರೆ. ಮುಂದಿನ ಹಂತದಲ್ಲಿ ಕಾನೂನಿಗೆ ತಿದ್ದುಪಡಿ ತಂದು ಈ ಹಿಂದಿನಂತೆ ಮೂವರು ಸದಸ್ಯರು ಮಾತ್ರ ಇರುವ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮುಡಾದಲ್ಲಿ ನಡೆದಿರುವ ಹಗರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಹಂಚಿಕೆಯಾಗಿರುವ ನಿವೇಶನಕ್ಕೂ ಸಂಬಂಧವಿಲ್ಲ. ಪಾರ್ವತಿಗೆ ಕಾನೂನುಬದ್ಧವಾಗಿ ನಿವೇಶನ ಹಂಚಲಾಗಿದೆ. ಕೆಸರೆ ಗ್ರಾಮದಲ್ಲಿ ಪಾರ್ವತಿ ಅವರ 3.16 ಎಕರೆ ಜಮೀನನ್ನು ಮುಡಾ ಭೂ ಸ್ವಾಧೀನ ಪಡಿಸಿಕೊಂಡು ಅದಕ್ಕೆ ಪರಿಹಾರ ರೂಪದಲ್ಲಿ ವಿಜಯನಗರದಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಇಂಥದ್ದೇ ಬಡಾವಣೆಯಲ್ಲಿ ನಿವೇಶನ ಬೇಕೆಂದು ಸಿಎಂ ಕುಟುಂಬದವರು ಕೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾರ್ವತಿಗೆ ದೊರೆತ್ತಿರುವ ಜಾಗವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಲ್) ವ್ಯಾಪ್ತಿಗೆ ಒಳಪಟ್ಟ ಜಾಗವಲ್ಲ. 1985ರಲ್ಲಿ ಸಾರ್ವಜನಿಕ ಹರಾಜಿನಲ್ಲಿ ದಲಿತ ಸಮುದಾಯದ ಜವರ ಎಂಬವರು 3.16 ಎಕರೆ ಕೃಷಿ ಭೂಮಿಯನ್ನು ಖರೀದಿಸಿದರು. ಅದು ಸರ್ಕಾರ ನೀಡಿದ ಜಾಗವಲ್ಲ, ಹರಾಜಿನ ಮೂಲಕ ಖರೀದಿಸಿದ ಜಾಗವಾದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಜಾಗವನ್ನು ಪಾರ್ವತಿ ಸಹೋದರ ಮಲ್ಲಿಕಾರ್ಜುನ ಖರೀದಿಸಿ ಪಾರ್ವತಿಗೆ ದಾನವಾಗಿ ನೀಡಿದರು. ಇದು ಶೇ.100 ರಷ್ಟು ಕಾನೂನು ಬದ್ಧವಾಗಿ ದೊರೆತ್ತಿರುವ ಜಾಗವಾಗಿ ಎಂದರು.

ಸಮಗ್ರ ತನಿಖೆ: ಹಗರಣದ ಕುರಿತು ತನಿಖೆ ನಡೆಸಲು ಸಮಿತಿ ರಚನೆಯಾಗಿದ್ದು, ಹಗರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲಿ ಹೋಯ್ತು, ಕೋತಿ ಹೋಯ್ತು ಅಂತ ಸಿಬಿಐ ತನಿಖೆಗೆ ವಹಿಸಲು ಸಾಧ್ಯವೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಲಾಗಿ ದೆಯೇ? ನಮ್ಮ ಅಧಿಕಾರಿಗಳು ಉತ್ತಮವಾಗಿ ತನಿಖೆ ನಡೆಸುವ ವಿಶ್ವಾಸವಿದೆ. ಇದುವರೆಗೆ ಮುಡಾದಲ್ಲಿ 50:50 ಅನುಪಾತದಲ್ಲಿ ಬದಲಿ ನಿವೇಶ ಪಡೆದವರ ಮಾಹಿತಿ ಬಿಡುಗಡೆ ಮಾಡಲಾಗುವುದು. ಹಗರಣದಲ್ಲಿ ಯಾರೇ ಭಾಗಿಯಾದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net