

ಬೆಂಗಳೂರು: ರಾಜಕಾರಣಿಗಳಾಗಬೇಕೆಂದು ಆಸಕ್ತಿ ಇಟ್ಟುಕೊಂಡವರಿಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ರಾಜ್ಯದಲ್ಲಿ ಸ್ಕೂಲ್ ಆಫ್ ಗವರ್ನೆನ್ಸ್ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ವಿಕಾಸಸೌಧದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ-2024ರ ಸಮಾರೋಪ ಉದ್ದೇಶಿಸಿ ಮಾತನಾಡಿದರು.
ಮೆಡಿಕಲ್, ಇಂಜಿನಿಯರಿಂಗ್, ಕಾನೂನು ಸೇರಿದಂತೆ ಎಲ್ಲ ವಿಷಯಗಳಿಗೂ ವಿಶ್ವವಿದ್ಯಾಲಯಗಳಿವೆ. ಆದರೆ ರಾಜಕಾರಣಿಗಳಾಗಬೇಕು ಎಂಬ ಆಸಕ್ತಿ ಇಟ್ಟುಕೊಂಡವರಿಗೆ ಪ್ರತ್ಯೇಕ ಶಿಕ್ಷಣ ಸೌಲಭ್ಯವಿಲ್ಲ. ರಾಜಕಾರಣಿಗಳನ್ನೇ ಗುರು ಎಂದು ಭಾವಿಸಿ ಹಿಂಬಾಲಿಸುವವರೇ ಹೆಚ್ಚು. ಹೀಗಾಗಿ ರಾಜಕೀಯ ತರಬೇತಿ ನೀಡಲು ಸ್ಕೂಲ್ ಆಫ್ ಗವರ್ನೆನ್ಸ್ ಆರಂಭಿಸಲು ವಿಧಾನ ಮಂಡಲದ ಉಭಯಸದನಗಳ ಮುಖ್ಯಸ್ಥರೂ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಶೇ.90 ರಷ್ಟು ಬಡವರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಾರೆ. ಆದರೆ ಸೂಟು-ಬೂಟು ತೊಟ್ಟ ವಿದ್ಯಾವಂತರೇ ಮತ ಹಾಕುವುದಿಲ್ಲ. ಪ್ರತಿಯೊಬ್ಬರೂ ಮತದಾನ ಮಹತ್ವ ಅರಿತುಕೊಳ್ಳಬೇಕು. ಮತದಾರರು ಜಾಗ್ರತೆಯಿಂಧ ಮತ ಹಾಕಿದಾಗಿ ಮಾತ್ರ ಮೌಲ್ಯಾಧಾರಿತ ರಾಜಕಾರಣ ಕಾಣಲು ಸಾಧ್ಯ ಎಂದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾಗಿ ನೆಮ್ಮದಿ ಇದೆಯೇ? ಎಂದು ಪ್ರಶ್ನಿಸಿಕೊಂಡರೆ ನಿಜಕ್ಕೂ ನನಗಂತೂ ನೆಮ್ಮದಿ ಇಲ್ಲ. ಎಲ್ಲಿಯವರೆಗೆ ದುಡ್ಡು ತೆಗೆದುಕೊಂಡು ಮತ ಹಾಕುತ್ತಾರೋ ಅಲ್ಲಿಯವರೆಗೆ ವ್ಯವಸ್ಥೆ ಹೀಗೆಯೇ ಇರುತ್ತದೆ. ನಾನ್ಯಾಕೆ ಪ್ರಾಮಾಣಿಕವಾಗಿ ಇರಬೇಕೆಂದು ನಮಗೂ ಅನ್ನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ದುಡ್ಡು ಕೊಟ್ಟು ಆಯ್ಕೆ ಆಗಿ ಬಂದವರಿಗೆ ರಾಜ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಎಲ್ಲ ಕ್ಷೇತ್ರದಂತೆ ರಾಜಕಾರಣದಲ್ಲೂ ಕುಸಿದಿರುವ ಮೌಲ್ಯವನ್ನು ಮೇಲೆತ್ತುವ ಕೆಲಸ ಆಗಬೇಕು. ಮಾನಸಿಕವಾಗಿ ನೆಮ್ಮದಿಯಾಗಿದ್ದಾಗ ಮಾತ್ರ ಪ್ರಾಮಾಣಿಕ ಕೆಲಸ ಸಾಧ್ಯ. ಪ್ರಾಮಾಣಿಕ ರಾಜಕಾರಣ ಬಂದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಲಯವಾರು ತಲಾ 10 ವಿದ್ಯಾರ್ಥಿಗಳಂತೆ ಒಟ್ಟು 50 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧವೇಶನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 10 ಜನ ಸಂಸದೀಯ ಪಟುಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಪ್ರಥಮ ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ 7 ಸಾವಿರ ರೂ., ತೃತೀಯ ಬಹುಮಾನವಾಗಿ 3 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. 7 ಜನರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಸಂಗ್ರೇಶಿ , ಸಂಸ್ಥೆಯ ನಿರ್ದೇಶಕ ಕೆ.ದ್ವಾರಕಾನಾಥ್, ಪ್ರೊ.ಸಿ.ಎಸ್. ಪಾಟೀಲ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.