5 ಅಂಗಡಿಯಲ್ಲಿ ಕಳ್ಳತನ! ಕೋಳ ಬಿಚ್ಚಿದ್ದೇ ತಡ ಕಾಡಿನ ಹಾದಿಯಲ್ಲಿ ಓಟ; ಖಾಕಿ ಕಣ್ಣಿಗೆ ಮಣ್ಣೆರಚಿದ ಅಪ್ಪ-ಮಗ | Thieves

ವಿಜಯವಾಣಿ - 2025-09-28T154332.100
Published on

Thieves: ಕೇರಳದ ಪಲೋಡ್‌ನ ಐದು ಅಂಗಡಿ ಮತ್ತು ಸೇಂಟ್ ಮೇರಿ ಚರ್ಚ್‌ನಲ್ಲಿ ರಾತ್ರೋರಾತ್ರಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಇದೀಗ ಅವರು ಪರಾರಿಯಾಗುವುದಕ್ಕೆ ಪರೋಕ್ಷವಾಗಿ ಕಾರಣರಾಗಿದ್ದಾರೆ.

ನೆಡುಮಂಗಾಡ್‌ನ ವಾಲಿಕೋಡ್ ಮೂಲದ ಸೈತಲವಿ ಮತ್ತು ಆತನ ತಂದೆ ಅಯೂಬ್ ಖಾನ್ ಪರಾರಿಯಾಗಿರುವ ಖದೀಮರು. ಈ ಇಬ್ಬರನ್ನು ವಯನಾಡಿನಿಂದ ಬಂಧಿಸಿ ಪಲೋಡ್‌ಗೆ ಕರೆತರುವಾಗ ದಾರಿ ಮಧ್ಯೆ ಶೌಚಾಲಯಕ್ಕೆ ಹೋಗಬೇಕು. ದಯವಿಟ್ಟು ಜೀಪನ್ನು ನಿಲ್ಲಿಸಿ ಎಂದು ಡ್ರಾಮಾ ಮಾಡಿದ್ದಾರೆ. ಈ ವೇಳೆ ಓರ್ವ ಆರೋಪಿಯ ಕೈಕೋಳವನ್ನು ಖಾಕಿ ಬಿಚ್ಚಿದ್ದೇ ತಡ, ಇಬ್ಬರು ಕ್ಷಣಮಾತ್ರದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳ್ಳರು ತಪ್ಪಿಸಿಕೊಂಡ ಪ್ರದೇಶವು ಗುಡ್ಡಗಾಡು ಎನ್ನಲಾಗಿದೆ. ಕೃಷಿಭೂಮಿ ಮತ್ತು ಕಾಡುಗಳು ಇರುವುದರಿಂದ, ವಿವಿಧ ಠಾಣೆಗಳ ಪೊಲೀಸರು ಜಂಟಿಯಾಗಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದಕ್ಕೂ ಮೊದಲಿಗೆ ಇಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಸಿಸಿಟಿವಿ ದೃಶ್ಯಗಳ ಸಹಾಯದಿಂದ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು, ಅಪ್ಪ-ಮಗನ ಜೋಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆದರೆ, ಕರೆತರುವಲ್ಲಿ ಎಡವಟ್ಟು ಆಗಿದ್ದು, ಸದ್ಯ ಇಬ್ಬರೂ ಖಾಕಿ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net