ಸಾರಿ ಫ್ರೆಂಡ್ ಎಂದು ಕ್ಷಮಾಪಣಾ ಪತ್ರ ಬರೆದಿಟ್ಟು ಕಳ್ಳತನ ಮಾಡಿದ ಕಳ್ಳ! ದುಡ್ಡು ಸಿಕ್ಕಾಗ ವಾಪಸ್ ತಂದುಕೊಡ್ತಾನಂತೆ!

kalla
Published on

ಭೋಪಾಲ್: ಕಳ್ಳತನ ಮಾಡುವವರಿಗೆ ಕರುಣೆ ಎನ್ನುವುದು ಇರುತ್ತದೆಯೇ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಆದರೆ ಇಲ್ಲೊಬ್ಬ ಕಳ್ಳನ ಬಗ್ಗೆ ಯಾವುದೇ ಅನುಮಾನವಿಲ್ಲದೆ ಕರುಣೆಯಿದೆ ಎನ್ನಬಹುದು. ಏಕೆಂದರೆ ಆ ಕಳ್ಳ ಕದಿಯುವ ಮುನ್ನ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟಿದ್ದಾನೆ.

ಮಧ್ಯಪ್ರದೇಶದ ಭಿಂದ್ ಗ್ರಾಮದ ವ್ಯಕ್ತಿಯೊಬ್ಬರು ದೂರದ ಚತ್ತೀಸ್​ಗಢದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಹೆಂಡತಿ ಮತ್ತು ಮಕ್ಕಳು ಭಿಂದ್ ನಗರದಲ್ಲೇ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅವರೆಲ್ಲರು ಸಂಬಂಧಿಕರ ಮನೆಗೆ ತೆರಳಿದ್ದರಂತೆ. ವಾಪಸು ಮನೆಗೆ ಬಂದು ನೋಡಿದ ಅವರಿಗೆ ಶಾಕ್ ಆಗಿದೆ.

ಮನೆಯ ಬಾಗಿಲಿನ ಬೀಗ ಒಡೆದಿದ್ದು, ಮನೆಯೊಳಗಿದ್ದ ಒಂದಿಷ್ಟು ಚಿನ್ನಾಭರಣ ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲೇ ಒಂದು ಕ್ಷಮಾಪಣಾ ಪತ್ರವೂ ಸಿಕ್ಕಿದೆ. ಅದರಲ್ಲಿ, "ಕ್ಷಮಿಸಿ ಸ್ನೇಹಿತರೇ. ನಾನು ಈ ರೀತಿ ಮಾಡಲೇಬೇಕಿತ್ತು. ಹೀಗೆ ಮಾಡಿಲ್ಲವೆಂದರೆ ನನ್ನ ಸ್ನೇಹಿತನ ಪ್ರಾಣ ಹೋಗುತ್ತಿತ್ತು. ಆತನ ಜೀವ ಉಳಿಸಿಕೊಳ್ಳಲು ನಾನು ಹೀಗೆ ಮಾಡಲೇಬೇಕಾಯಿತು. ಚಿಂತಿಸಬೇಡಿ, ನನಗೆ ಹಣ ಸಿಕ್ಕಾಗ ಅದನ್ನು ವಾಪಸು ತಂದುಕೊಡುತ್ತೇನೆ" ಎಂದು ಬರೆದಿತ್ತು.

ಈ ವಿಚಾರವಾಗಿ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಈ ಕಳ್ಳತನದಲ್ಲಿ ಪರಿಚಯಸ್ಥರು ಭಾಗಿಯಾಗಿರುವ ಅನುಮಾನ ಇದೆ ಎಂದು ಕುಟುಂಬ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net