

ನವದೆಹಲಿ: ಒಂದು ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಾಹೀನ್ ಬಾಘ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವರನ್ನು ಕೇವಲ ಒಂದೇ ಗಂಟೆಯಲ್ಲಿ ಓಡಿಸಲಾಗುವುದೆಂದು ಬಿಜೆಪಿ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಚುನಾವಣೆ ಬೇರೆ ಚುನಾವಣೆಯಂತಲ್ಲ. ಈ ಚುನಾವಣೆ ದೇಶದ ಒಗ್ಗಟ್ಟನ್ನು ನಿರ್ಧರಿಸುವ ಚುನಾವಣೆಯಾಗಿದೆ. ಒಂದು ವೇಳೆ ಫೆ. 11ರಂದು ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಒಂದೇ ಗಂಟೆಯಲ್ಲಿ ಪ್ರತಿಭಟನಾಕಾರರನ್ನು ಮನೆಗೆ ಓಡಿಸಲಾಗುವುದು ಎಂದಿದ್ದಾರೆ. ಅಲ್ಲದೆ ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲು ಒಂದು ಬಿಡಿ ಭಾಗವನ್ನು ನೀಡುವುದಿಲ್ಲ ಎಂದು ವರ್ಮಾ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿರುವ ವರ್ಮಾ, ಶಾಹೀನ್ ಬಾಘ್ನಲ್ಲಿ ಲಕ್ಷಾಂತರ ಮಂದಿ ಒಟ್ಟಿಗೆ ಸೇರಿದ್ದಾರೆ. ಅವರು ನಿಮ್ಮ ಮನೆ ಒಳ ಹೊಕ್ಕಿ ನಿಮ್ಮ ಸಹೋದರಿ ಹಾಗೂ ಹೆಣ್ಣು ಮಕ್ಕಳನ್ನು ಅತ್ಯಾಚಾರಗೈದು ಕೊಲೆ ಮಾಡಲಿದ್ದಾರೆ. ಇಂದು ನಿಮಗೆ ಒಳ್ಳೆಯ ಸಮಯ ಸಿಕ್ಕಿದೆ. ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ನಿಮ್ಮ ರಕ್ಷಣೆಗೆ ಬರುವುದಿಲ್ಲ ಎಂದಿದ್ದಾರೆ.
ಪಶ್ಚಿಮ ದೆಹಲಿಯ ಸಂಸದರಾಗಿರುವ ವರ್ಮಾ ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ವಿಕಾಸಪುರಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)