ಸಂಜೆ ಒಟ್ಟಿಗೆ ಸೇರಿದ್ದಾರೆ, ಇದರಲ್ಲಿ ತಪ್ಪೇನಿದೆ?

DK Shivakumar
Published on

ದೆಹಲಿ: ಕಳೆದ ಗುರುವಾರ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಊಟ ಸಹಿತ ಸಚಿವರ ಸಭೆಯ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕುಟುಂಬ ಸಹಿತ ವಿದೇಶ ಪ್ರವಾಸಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಸೋಮವಾರ ಮಾಧ್ಯಮದ ಮುಂದೆ ಹಾಜರಾದಾಗ ಡಿನ್ನರ್ ಮೀಟಿಂಗ್ ಕುರಿತ ಪ್ರಶ್ನೆ ಎದುರಿಸಿದರು.

ನಿಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆ ಎಂದು ಕೇಳಿದಾಗ, ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ. ಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ಎಂದರು.

ಅನೇಕ ಮಂತ್ರಿಗಳು ಸಹ ಕುಟುಂಬದವರ ಜತೆ ವಿದೇಶಿ ಪ್ರವಾಸ ಹೋಗಿದ್ದರು. ಬೆಂಗಳೂರಿನಲ್ಲಿ ಇದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಹೇಳಿದರು. ಜತೆಗೆ ಸಂಪುಟ ಪುನರ್ ರಚನೆಯಾಗಬೇಕು ಎಂಬ ಎಚ್.ಕೆ.ಪಾಟೀಲ್ ಅಭಿಪ್ರಾಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ, ನಿಮ್ಮ ಅಭಿಪ್ರಾಯವೇನು ಎಂಬ ಪತ್ರಕರ್ತರ ಪ್ರಶ್ನೆಗೆ, ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net