ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್‌ಗೆ ಮಾರಲು ಹೊರಟಿದ್ದಾರೆ

Ranadeep Surjewala
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ
Published on

ಬೆಂಗಳೂರು: ಎಚ್‌ಎಂಟಿಗೆ ಮಂಜೂರಾದ ಅರಣ್ಯ ಭೂಮಿಯನ್ನು ವಾಪಸ್ ಪಡೆಯುವ ವಿಚಾರಕ್ಕೆ ಆಕ್ಷೇಪ ಎತ್ತಿದ ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ನಡೆ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ಹೊರಹಾಕಿದ್ದಾರೆ.

1960ರ ದಶಕದಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನ ಹೃದಯಭಾಗದಲ್ಲಿರುವ ಗೊರಗುಂಟೆ ಪಾಳ್ಯದ ಬಳಿ ಕಾರ್ಖಾನೆಗಾಗಿ ಎಚ್‌ಎಂಟಿ ಸಂಸ್ಥೆಗೆ 443 ಎಕರೆ ಭೂಮಿ ಮಂಜೂರು ಮಾಡಿತ್ತು. ಕಾರ್ಖಾನೆ ಕಳೆದ 15 ವರ್ಷಗಳಿಂದಲೂ ಸ್ಥಗಿತಗೊಂಡಿದೆ. ಇಲ್ಲಿನ 280 ಎಕರೆ ಜಾಗದಲ್ಲಿ ಅರಣ್ಯ ಇಲಾಖೆಯು ಕಬ್ಬನ್ ಪಾರ್ಕ್‌ನಂತೆ ‘ಜೀವ ವೈವಿಧ್ಯತೆ ಉದ್ಯಾನವನ’ ನಿರ್ಮಿಸಲು ಉದ್ದೇಶಿಸಿದೆ. ಆದರೆ ಕೇಂದ್ರ ಸರ್ಕಾರ ಮತ್ತು ಕುಮಾರಸ್ವಾಮಿ ಭೂಮಿಯನ್ನು ರಿಯಲ್ಎಸ್ಟೇಟ್ ಅಭಿವೃದ್ಧಿಗಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಜಮೀನಿಗಾಗಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದು, 27ಕ್ಕೆ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರವು ಭೂಮಿಯಲ್ಲಿ ಕಬ್ಬನ್ ಪಾರ್ಕ್‌ನಂತಹ ಜೈವಿಕ ವೈವಿಧ್ಯತೆಯ ಉದ್ಯಾನವನ ನಿರ್ಮಿಸಲು ಬಯಸಿದರೆ, ಬಿಜೆಪಿ-ಜನತಾದಳ ರಿಯಲ್ಎಸ್ಟೇಟ್ ಅಭಿವೃದ್ಧಿಗೆ ಧಾರೆ ಎರೆಯಲು ಸಿದ್ಧವಾಗಿವೆ ಎಂದು ಸುರ್ಜೇವಾಲಾ ಆಪಾದಿಸಿದ್ದಾರೆ. ಬೆಂಗಳೂರಿನ ಜನರಿಗೆ ಹಸಿರು ಹೊದಿಕೆ ಮತ್ತು ಪರಿಶುದ್ಧ ಗಾಳಿ ನೀಡುವುದಕ್ಕಿಂತ ರಿಯಲ್ಎಸ್ಟೇಟ್ ಮೂಲಕ ಹಣ ಗಳಿಸುವುದೇ ಬಿಜೆಪಿ- ಜನತಾದಳ ಪಕ್ಷಗಳಿಗೆ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net