ಈ ಕರೊನಾ ವಾರಿಯರ್​ಗಳಿಗೆ ನಾಲ್ಕು ತಿಂಗಳಿನಿಂದ ಸಿಕ್ಕಿಲ್ಲ ಸಂಬಳ!

arogya shayaki april
Published on

ಶಿರಸಿ: ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಶಂಕಿತರಿಗೆ ತುರ್ತು ಚಿಕಿತ್ಸೆ ನೀಡುತ್ತಿರುವ 300ಕ್ಕೂ ಅಧಿಕ ಕಿರಿಯ ಆರೋಗ್ಯ ಸಹಾಯಕಿಯರಿಗೆ 4 ತಿಂಗಳಿನಿಂದ ಸಂಬಳ ಆಗಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ಈ ಕಿರಿಯ ಆರೋಗ್ಯ ಸಹಾಯಕಿಯರು ಕೆಲಸ ಮಾಡುತ್ತಿದ್ದು, ಕಳೆದ ಡಿಸೆಂಬರ್‌ನಿಂದ ಸಂಬಳ ಆಗಿಲ್ಲ. ಜತೆಗೆ 2 ವರ್ಷಗಳಿಂದ ಟಿಎ-ಡಿಎ ಕೂಡ ನೀಡಿಲ್ಲ. ಬಿಸಿಲು-ಮಳೆ ಲೆಕ್ಕಿಸದೆ ಕುಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ಕರೊನಾ ಶಂಕಿತರಿಗೆ ತುರ್ತು ಚಿಕಿತ್ಸೆ ನೀಡುವ ಜವಾಬ್ದಾರಿಯೂ ಇದೆ. ಅದಕ್ಕಾಗಿ ಹಳ್ಳಿಹಳ್ಳಿಯಲ್ಲಿ ತಿರುಗಾಡಲೂ ಹಣವಿಲ್ಲದೆ ಪರದಾಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ರೆಡ್ ಜೋನ್‌ನಲ್ಲಿ ಇರುವುದರಿಂದ ಯಾರಿಗಾದರೂ ಕೆಮ್ಮು-ಜ್ವರ ಬಂದಿದೆ ಎಂಬ ಮಾಹಿತಿ ಸಿಕ್ಕರೆ ಕೂಡಲೇ ಶಂಕಿತರೆಂದು ಪರಿಗಣಿಸಿ ಕೋವಿಡ್ ಚಿಕಿತ್ಸೆಗೆ ಕರೆತರುವುದು ಇವರ ಕಾರ್ಯ. ಇವರಿಗೆ ಸೂಕ್ತ ರಕ್ಷಣಾ ಪರಿಕರ ನೀಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಸ್ವಂತ ಆರೋಗ್ಯದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಸಂಬಳವಿಲ್ಲದೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ವೇತನ ನೀಡುವ ಜತೆಗೆ, ಕೋವಿಡ್ ವಿರುದ್ಧ ಹೋರಾಡಲು ಸೂಕ್ತ ರಕ್ಷಣಾ ಸಾಮಗ್ರಿ ನೀಡಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಿರಿಯ ಆರೋಗ್ಯ ಸಹಾಯಕಿ.

ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ಡಾ. ಅಶೋಕಕುಮಾರ, ಬಜೆಟ್ ಕೊರತೆಯಿಂದ ಡಿಸೆಂಬರ್‌ನಿಂದ ವೇತನ ಆಗಿಲ್ಲ. ಈ ಕುರಿತು ಇಲಾಖೆಯ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ಕೋವಿಡ್ 19 ತುರ್ತು ಚಿಕಿತ್ಸೆ ನೀಡುವ ಆರೋಗ್ಯ ಸಹಾಯಕಿಯರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net