ಹಳೇ ಐಫೋನ್​ನಲ್ಲಿದೆ ಚಿನ್ನ! ತೆಗೆಯುವ ವಿಧಾನ ಕಂಡುಹಿಡಿದ ವಿಜ್ಞಾನಿಗಳು

Untitled design
Published on

ಅಡಿಲೇಡ್: ಕ್ಷಿಪ್ರವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯ (ಇ-ತ್ಯಾಜ್ಯ) ರಾಶಿಯನ್ನು ನಿರ್ವಹಿಸುವುದೇ ಜಗತ್ತಿಗೆ ತಲೆನೋವಾಗಿರುವ ಈ ಸಂದರ್ಭದಲ್ಲಿ ಹಳೆಯ ಫೋನ್​ಗಳು, ಕಂಪ್ಯೂಟರ್​ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳಿಂದ ಚಿನ್ನವನ್ನು ತೆಗೆಯಲು ವಿಜ್ಞಾನಿಗಳು ಹೊಸ, ಪರಿಸರಸ್ನೇಹಿ ವಿಧಾನವನ್ನು ಕಂಡುಹಿಡಿದಿದ್ದಾರೆ. ಈ ಹೊಸ ತಂತ್ರಜ್ಞಾನ ವನ್ನು ‘ನೇಚರ್ ಸಸ್ಟೇನೆಬಿಲಿಟಿ’ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ವರದಿಯಲ್ಲಿ ವಿಜ್ಞಾನಿಗಳು ವಿವರಿಸಿದ್ದಾರೆ. ಸಾಂಪ್ರದಾಯಿಕ ಚಿನ್ನ ಗಣಿಗಾರಿಕೆ ಸಾಮಾನ್ಯವಾಗಿ ಪರಿಸರಕ್ಕೆ ಹಾನಿಕಾರಕವಾಗಿರುತ್ತವೆ. ಅದರಲ್ಲಿ ಕಠಿಣ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಆದರೆ ಹೊಸ ವಿಧಾನದಲ್ಲಿ ಇದ್ಯಾವುದೂ ಇರುವುದಿಲ್ಲವಾದ್ದರಿಂದ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಆಗುವುದಿಲ್ಲ. ಈ ಪ್ರಕ್ರಿಯೆಯನ್ನು ಈಗಾಗಲೇ ಇ-ತ್ಯಾಜ್ಯ, ನೈಸರ್ಗಿಕ ಅದಿರು ಮತ್ತು ಚಿನ್ನ ಹುದುಗಿರುವ ಇತರ ವಸ್ತುಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಹೊಸ ತಂತ್ರಜ್ಞಾನವು ಮೂರು ಹಂತಗಳನ್ನು ಒಳಗೊಂಡಿದೆ. ಮೊದಲು ಟ್ರೖೆಕ್ಲೋರೊ ಐಸೊಸಯಾನೂರಿಕ್ ಆಮ್ಲವನ್ನು ಬಳಸಿಕೊಂಡು ಚಿನ್ನವನ್ನು ಕರಗಿಸಲಾಗುತ್ತದೆ. ನಂತರ, ಸೊಲ್ಯೂಷನ್​ನಲ್ಲಿ ಹುದುಗಿಹೋಗಿರುವ ಚಿನ್ನವನ್ನು, ಹೊಸದಾಗಿ ಸೃಷ್ಟಿಸಲಾದ ಪಾಲಿಸಲ್ಪೈಡ್ ಪಾಲಿಮರ್ ಸಾರ್ಬೆಂಟ್ ಹೀರಿಕೊಳ್ಳುತ್ತದೆ. ಆ ಬಳಿಕ, ಪಾಲಿಮರ್​ನ ಪೈರೋಲಿಸಿಸ್ ಅಥವಾ ಡಿಪಾಲಿಮರೈಸೇಶನ್ ಪ್ರಕ್ರಿಯೆಯ ಮೂಲಕ ಚಿನ್ನವನ್ನು ಪಡೆಯಲಾ ಗುತ್ತದೆ. ಈ ಹೊಸ ತಂತ್ರಜ್ಞಾನ ಪರಿಸರ ರಕ್ಷಣೆಯ ದಿಸೆಯಲ್ಲಿ ಒಂದು ಪ್ರಮುಖ ಹೆಜ್ಜೆ. ಇದೇ ಪ್ರಕ್ರಿಯೆಯನ್ನು ಕೈಗಾರಿಕಾ-ಪ್ರಮಾಣದ ಸಾಮರ್ಥ್ಯಕ್ಕೆ ಪರಿವರ್ತಿಸಿದರೆ ಬೃಹತ್ ಪ್ರಮಾಣದ ಇ-ತ್ಯಾಜ್ಯವನ್ನು ಚಿನ್ನವಾಗಿ ಪರಿವರ್ತಿಸಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net